ಚೆಟ್ಟಳ್ಳಿ, ಏ. 22: ವೀರಾಜಪೇಟೆ ಸಮೀಪದ ಕಡಂಗದ ಅರಫಾ ಫ್ರೆಂಡ್ಸ್ ವತಿಯಿಂದ 16 ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಇಲ್ಲಿನ ಸರ್ಕಾರಿ ಶಾಲಾ ಮೈದಾನದಲ್ಲಿ ವಿಧ್ಯುಕ್ತ ಚಾಲನೆ ದೊರಕಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದ ಸಂಸ್ಥಾಪಕ ರಶೀದ್ ಎಡಪಾಲ 2003ರಲ್ಲಿ ಆರಂಭವಾದ ಕ್ರಿಕೆಟ್ ಪಂದ್ಯಾಟ ಎಲ್ಲಾ ದಾನಿಗಳು ಹಾಗೂ ಕ್ರೀಡಾ ಪ್ರೇಮಿಗಳ ಸಹಕಾರದಿಂದ ಯಶಸ್ವಿಯಾಗಿ 16ನೇ ವರ್ಷದಕ್ಕೆ ಕಾಲಿಟ್ಟಿರುವದು ಬಹಳ ಸಂತೋಷದಾಯಕ ವಿಷಯವಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿ ಮಹೇಂದ್ರಾ ರೆಸಾರ್ಟ್ ವ್ಯವಸ್ಥಾಪಕ ಜಿಷ್ಣು ಮಾತನಾಡಿ ಇಂತಹ ಕ್ರೀಡಾಕೂಟ ಆಯೋಜನೆ ಮಾಡುವದರಿಂದ ಸೌಹಾರ್ದತೆ ಬೆಳೆಸಬಹುದು ಎಂದರು. ಕಡಂಗದ ಅರಫಾ ಫ್ರೆಂಡ್ಸ್ ಎರಡನೇ ಬಾರಿ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವದು ಶ್ಲಾಘನೀಯ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ಅರಫಾ ಫ್ರೆಂಡ್ಸ್ ಅಧ್ಯಕ್ಷ ಅಬ್ದುರಹಮಾನ್ ಅರಫಾ, ಕಡಂಗ ಜಮಾಹತ್ ಕಾರ್ಯದರ್ಶಿ ಮಮ್ಮು, ಸಲಾಂ ಆರ್ಮಿ, ಆಯೋಜಕರಾದ ನೌಷಾದ್, ಗ್ರಾಮ ಪಂಚಾಯತಿ ಸದಸ್ಯರಾದ ಸುಬೀರ್, ಸಮೀರ್, ನೌಫಲ್, ಅರಬಿ, ಅಬೂಬಕರ್ ಇದ್ದರು .