ಸೋಮವಾರಪೇಟೆ, ಏ. 22: ತಾಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಎಂದೇ ಕರೆಯಲ್ಪಡುವ ನಗರಳ್ಳಿ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಸಾಂಪ್ರದಾಯಿಕ ವಿಶೇಷ ಪೂಜೆ ನಡೆಯಿತು. ತಾ. 29 ರಂದು ನಗರಳ್ಳಿಯಲ್ಲಿ ಸುಗ್ಗಿ ಉತ್ಸವ ನಡೆಯಲಿದೆ.

ದೇವಿಯ ತವರೂರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ವಿಶೇಷ ಪೂಜೆ ನಡೆಯಿತು. ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ನಂತರ ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ಬಂದೂಕಿನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಸಾಂಪ್ರದಾಯಿಕ ಆಚರಣೆಗೆ ಚಾಲನೆ ನೀಡಲಾಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವಿ ಸಮಿತಿಯ ಅಧ್ಯಕ್ಷ ಕೆ.ಟಿ.ಜೋಯಪ್ಪ, ಕೂತಿ ಗ್ರಾಮದ ಅಧ್ಯಕ್ಷ ಡಿ.ಎ. ಪರಮೇಶ್, ಉಪಾಧ್ಯಕ್ಷ ಯು.ಕೆ.ಶಿವರಾಜ್, ಅರ್ಚಕರಾದ ಅನಂತರಾಮ್, ಬಿ.ಪಿ.ಪ್ರದೀಪ್ ಕುಮಾರ್, ಹೆಚ್.ಎಸ್. ದಿವಾಕರ್, ಉಮೇಶ್, ದಯಾನಂದ, ಧರ್ಮಪಾಲ, ರೇವಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೀಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮದ ಎಲ್ಲಾ ವರ್ಗದ ಜನರು ಒಂದುಗೂಡಿ ಶ್ರದ್ಧಾ ಭಕ್ತಿಯಿಂದ ಉತ್ಸವ ಆಚರಿಸುವದು ನಗರಳ್ಳಿ ಸುಗ್ಗಿಯ ವಿಶೇಷ.