ಮಡಿಕೇರಿ, ಏ. 22: ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನ ಮತ್ತು ವಾಂಡರರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಇಪ್ಪತ್ತು ದಿನಗಳ ಬೇಸಿಗೆ ಕ್ರೀಡಾ ಶಿಬಿರ ಮುಕ್ತಾಯಗೊಂಡಿತು.
ಸುಮಾರು ಇನ್ನೂರು ಕ್ರೀಡಾರ್ಥಿಗಳಿಗೆ ಶಿಬಿರದಲ್ಲಿ ಕ್ರಿಕೆಟ್, ಹಾಕಿ, ಹ್ಯಾಂಡ್ ಬಾಲ್, ಕ್ರೀಡೆಗಳನ್ನು ಜಿಲ್ಲೆ ಹಾಗೂ ಹೊರಜಿಲ್ಲೆಗಳ ತರಬೇತುದಾರರಿಂದ ತರಬೇತಿ ನೀಡಲಾಯಿತು. ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲದೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕ್ರಿಕೆಟ್ ಹಾಗೂ ಹಾಕಿ ತರಬೇತಿ ಇದ್ದುದು ವಿಶೇಷ.
ಮುಕ್ತಾಯ ಸಮಾರಂಭದಲ್ಲಿ ಪಾರಿತೋಷಕ ಹಾಗೂ ಬಹುಮಾನಗಳನ್ನು ವಿತರಿಸಿ ಶಾಲಾ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಮಾತನಾಡಿದರು. ಕ್ರೀಡೆಯಲ್ಲಿ ತೊಡಗುವ ವಿದ್ಯಾರ್ಥಿಗಳ ಗುರಿ ವಿಶ್ವ ಸಾಧನೆ ಆಗಿರಬೇಕು ಎಂದರು. ಡ್ಯೂಕ್ ಆಫ್ ವೆಲ್ಲಿಂಗ್ಟನ್- ವೆಲ್ಲಿಂಗ್ಟನ್ ಕಥೆಯನ್ನು ವಿವರಿಸಿದರು.
ಫ್ರಾನ್ಸ್ ಮತ್ತು ಇಂಗ್ಲೆಂಡ್‍ನ ಭಾರೀ ಯುದ್ಧದಲ್ಲಿ ನೆಲ್ಸನ್ ಪರಾಕ್ರಮಿ ನೆಪೋಲಿಯನನ್ನು ಸೋಲಿಸುತ್ತಾನೆ. ಯುದ್ಧದಲ್ಲಿ ಗೆಲ್ಲಲು, ತಾನು ಈಟನ್ ಕಾಲೇಜಿನಲ್ಲಿ ಕ್ರಿಕೆಟ್ ನಾಯಕ ಆಗಿದ್ದಾಗ ಕಲಿತ ಸಂಘಟನೆ, ನಾಯಕತ್ವ ಮತ್ತು ಸ್ಥಳೀಯ ಮರ್ಮಗಳು ಸಹಕಾರಿ ಆದವು ಎನ್ನುತ್ತಾನೆ. ಹಾಗಾಗಿ ಕ್ರೀಡೆ ಜೀವನಕ್ಕೂ ಸಹಕಾರಿಯಾಗಿದ್ದು, ಕ್ರೀಡಾಪಟುಗಳು ಆಸಕ್ತಿ, ಶ್ರದ್ಧೆ, ಶ್ರಮವಹಿಸಿ ಮೇಲೆ ಬರಬೇಕೆಂದರು.
ಎನ್.ಸಿ.ಸಿ. ಅಧಿಕಾರಿ ದಾಮೋದರ್ ಮತ್ತು ಶಾಲಾ ವ್ಯವಸ್ಥಾಪಕ ರವಿ ನಿರೂಪಿಸಿದರು. ಶಾಲಾ ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ ನೇತೃತ್ವದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಕೆ.ಆರ್. ಪ್ರತಾಪ್ ರೆಡ್ಡಿ, ರಾಷ್ಟ್ರೀಯ ಆಟಗಾರ ಮತ್ತು ಕೋಚ್ ಮುದ್ದಪ್ಪ, ಸಮಿತಿ ಸದಸ್ಯ ಗುರುದತ್ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಶಬರಿ ಮಾದಪ್ಪ, ಚೆನ್ನೈನ ಮೀನಾಕ್ಷಿ ರೆಡ್ಡಿ, ಬೆಂಗಳೂರಿನ ಸುಚಿ ರೆಡ್ಡಿ ಹಾಜರಿದ್ದರು.