ಮಡಿಕೇರಿ, ಏ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 9 ರಿಂದ 16 ವರ್ಷದ ಮಕ್ಕಳಿಗೆ ಇಂದಿನಿಂದ ಮೇ 6 ರವರೆಗೆ ಉಚಿತವಾಗಿ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ನಗರದ ಸ್ತ್ರೀಶಕ್ತಿ ಭವನದಲ್ಲಿ ಆರಂಭಗೊಂಡಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಈಗಿನ ಕಾಲದಲ್ಲಿ ಮಕ್ಕಳು ಅಜ್ಜಿ ಮನೆಗೆ ಹೋಗುವ ಪರಿಪಾಠ ತುಂಬಾ ವಿರಳ. ಮಕ್ಕಳು ಅಪ್ಪ, ಅಮ್ಮನ ಜೊತೆ ಬೆಳೆಯುತ್ತಾರೆ, ಅಪ್ಪ, ಅಮ್ಮ ಮತ್ತು ಮಕ್ಕಳು ಇವಿಷ್ಟೇ ಕುಟಂಬವಾಗಿ ಬಿಟ್ಟಿದೆ. ಆದುದರಿಂದ ಮಕ್ಕಳನ್ನು ಬೇರೆ ಕಡೆ ಕಳುಹಿಸಲು ಹೆದರುತ್ತಾರೆ. ಮನೆಯಲ್ಲಿದ್ದರೂ ಸಹ ಮಕ್ಕಳಿಗೆ ಉತ್ತಮ ವಾತಾವರಣ ಇರುವದಿಲ್ಲ. ಟಿ.ವಿ., ಮೊಬೈಲ್‍ಗಳಲ್ಲಿಯೇ ಆಟವಾಡುತ್ತಿದ್ದು, ಯಾಂತ್ರಿಕ ಬದುಕು ನಡೆಸುತ್ತಿರುತ್ತಾರೆ. ಅದಕ್ಕಾಗಿ ಪೋಷಕರು ಇಂತಹ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಬೇಕು. ಮಣ್ಣಿನಲ್ಲಿ ಆಟಿಕೆಗಳನ್ನು ಮಾಡಬಹುದು. ಅದರಂತೆ ಯಕ್ಷಗಾನ ಕಲೆಯನ್ನು ಹೇಳಿಕೊಡುವದು ಒಳ್ಳೆಯ ಉದ್ದೇಶ. ಈ ಕಲೆಯನ್ನು ಮಕ್ಕಳೆಲ್ಲರೂ ಕಲಿತುಕೊಳ್ಳಿ ಎಂದು ತಿಳಿಸಿದರು.

ಈ ಬೇಸಿಗೆ ಶಿಬಿರವು 15 ದಿನಗಳ ಕಾಲ ನಡೆಯಲಿದ್ದು, ಎಲ್ಲರೂ ಬೆರೆತು ಒಬ್ಬರನ್ನೊಬ್ಬರು ಅರಿತು ಉತ್ತಮ ವಾತಾವರಣದಲ್ಲಿ ಹಲವು ವಿಚಾರಗಳನ್ನು ಪಡೆದುಕೊಂಡು, ಸಹಬಾಳ್ವೆ ನಡೆಸಿ ಎಂದು ಹಿತವಚನ ನುಡಿದರು.

ಜಿ.ಪಂ.ಸಿಇಒ ಕೆ. ಲಕ್ಷ್ಮಿಪ್ರಿಯಾ ಅವರು ಮಾತನಾಡಿ ಬೇಸಿಗೆ ಶಿಬಿರದಲ್ಲಿ ಮಧ್ಯಾಹ್ನದವರೆಗೆ ಯೋಗ, ಸಮೂಹ ನೃತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಜ್ಯುವೆಲ್ಲರಿ ಮೇಕಿಂಗ್ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವುಗಳಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಯೂನಿಸೆಪ್ ಸಂಸ್ಥೆಯಿಂದ ತರಬೇತಿ. ಬೆಂಕಿ ಅನಾಹುತ ವುಂಟಾದಾಗ ಮುನ್ನೆಚ್ಚರಿಕೆ ಕ್ರಮ, ಅನಿರೀಕ್ಷಿತ ಅಪಘಾತವಾದಾಗ ಪ್ರಥಮ ಚಿಕಿತ್ಸೆಯನ್ನು ಮಕ್ಕಳೇ ಮಾಡುವ ಬಗ್ಗೆ ತರಬೇತಿ, ಟ್ರಾಫಿಕ್ ನಿಯಮದ ಬಗ್ಗೆ ಅರಿವು ಕಾರ್ಯಕ್ರಮ, ಆಯುರ್ವೇದ ವೈದ್ಯ ಪದ್ಧತಿಗಳ ಬಗ್ಗೆ ಮಾಹಿತಿ, ಗಾಳಿಪಟ ಉತ್ಸವ ಹೊರಾಂಗಣ ಆಟ, ಹೊರ ಸಂಚಾರ, ಸ್ವಚ್ಛ ಭಾರತ ಕಾರ್ಯಕ್ರಮ, ಶ್ರಮದಾನ, ಕನ್ನಡ ಪದಸಂಪತ್ತು, ಪವಾಡ ಬಯಲು ಬಗ್ಗೆ ಮಾಹಿತಿ, ಪೋಕ್ಸೋ ಕಾಯ್ದೆ ಮಕ್ಕಳ ಚಲನಚಿತ್ರ ಪ್ರದರ್ಶನ ಇತ್ಯಾದಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ರಾಮಚಂದ್ರ, ಆರ್ಯುವೇದ ವೈದ್ಯ ಪದ್ಧತಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನೀನಾಸಂ ತಂಡದವರಾದ ಸುನೀಲ ಹಾಗೂ ಚೇತನ್ ಅವರು 15 ದಿನಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಿಕೊಡಲಿರುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಸ್ವಾಗತಿಸಿ, ಸಿಬ್ಬಂದಿ ಸತ್ಯಭಾಮ ನಿರೂಪಿಸಿ, ಜಯಂತಿ ವಂದಿಸಿದರು.