ವೀರಾಜಪೇಟೆ, ಏ. 23: ಸರ್ಕಾರವು ಪ್ರಯಾಣಿಕರಿಗೆ ಉಪಯೋಗವಾಗಲೆಂದು ಬಸ್ ತಂಗುದಾಣಗಳನ್ನು ನಿರ್ಮಿಸಿದೆ ಅದರೆ ವೀರಾಜಪೇಟೆ ನಗರದ ಹೃದಯ ಭಾಗದಲ್ಲಿರುವ ಗಡಿಯಾರ ಕಂಬದ ಬಳಿಯ ತಂಗುದಾಣವು ಇತ್ತೀಚಿನ ದಿನಗಳಲ್ಲಿ ಅನೈತಿಕ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಒಂದೆಡೆ ಕುಡುಕರ ಹಾವಳಿ ಮತ್ತೊಂದಡೆ ದಿಕ್ಕು ದೆಸೆÉಯಿಲ್ಲದ ಅಪರಿಚಿತ ಸ್ತ್ರೀಯರು ವಿಶ್ರಾಂತಿಯ ನೆಪದಲ್ಲಿ ಇಲ್ಲಿ ಠಿಕಾಣಿ ಮಾಡುತ್ತಿದ್ದಾರೆ.

ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ಮಕ್ಕಳು, ವೃದ್ಧರು, ನಾಗರಿಕರು ಬಸ್ಸಿಗಾಗಿ ಕಾಯುವ ಸಂದರ್ಭ ತಂಗುದಾಣದಲ್ಲಿ ಕೆಲವು ಕುಡುಕರು ಮಾತನಾಡುವ ಅಶ್ಲೀಲ ಮಾತು, ನಡೆದುಕೊಳ್ಳುವ ರೀತಿಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ರಾತ್ರಿ ಅನೈತಿಕ ಚಟುವಟಿಕೆಗಳು ಅರಂಭವಾಗಿ ಬೆಳಗ್ಗಿನವರೆಗೆ ನಡೆಯುತ್ತಿರುತ್ತದೆ. ರಾತ್ರಿ ಪಾಳೆಯದಲ್ಲಿ ಗಸ್ತು ತಿರುಗುವ ಪೊಲೀಸರು ಇತ್ತ ಗಮನಿಸದೇ ತಿಂಗಳುಗಳೇ ಕಳೆದಿದ್ದು, ಪಟ್ಟಣ ಪಂಚಾಯಿತಿಯು ಈ ತಂಗುದಾಣವನ್ನು ಅನೈತಿಕ ಚಟುವಟಿಕೆ ನಡೆಸಲು ಬಾಡಿಗೆ ನೀಡಿರಬಹುದು ಎಂಬ ಸಂಶಯ ಮೂಡುತ್ತಿದೆ ಎಂದು ಸ್ಥಳೀಯರಾದ ಅಕ್ಕಸಾಲಿಗರಾದ ಪ್ರವೀಣ್ ಪತ್ರಿಕೆಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯ ರಸ್ತೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ತೆರಳುವ ಕಾಲು ದಾರಿಯಿದ್ದು, ಸಂಜೆ 7 ಗಂಟೆಯಿಂದ ಬೆಳಿಗ್ಗೆಯವರೆಗೆ ಕಾನೂನು ಬಾಹಿರವಾದ ಚಟುವಟಿಕೆಗಳು ನಡೆಯುತ್ತದೆ ರಸ್ತೆಯ ಇಬ್ಬದಿಗಳಲ್ಲಿ ಗಿಡ ಗಂಟೆಗಳು ಬೆಳೆದು ರಾತ್ರಿಯ ಪಾಳೆಯದಲ್ಲಿ ಸಂಚರಿಸಲು ಯೋಗ್ಯವಾಗಿಲ್ಲ. ಸಂಬಂಧಿಸಿದ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯ ವಾಣಿಜ್ಯೋದಮಿಗಳು ಮನವಿ ಮಾಡಿದ್ದಾರೆ.

- ಕೆ.ಕೆ.ಎಸ್. ವೀರಾಜಪೇಟೆ