ವೀರಾಜಪೇಟೆ, ಏ. 23: ವೀರಾಜಪೇಟೆ ಬಳಿಯ ಐಮಂಗಲ ಗ್ರಾಮದಲ್ಲಿ ಕಾಡಾನೆಗಳ ತಂಡ ಬೀಡುಬಿಟ್ಟಿದ್ದು ನಿನ್ನೆ ರಾತ್ರಿ ಗ್ರಾಮದ ಕುಂಡ್ರಂಡ ಪೊನ್ನಪ್ಪ ಅವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ದಾಳಿ ನಡೆಸಿ ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಡಾನೆಗಳ ದಾಳಿಯಿಂದ ತೋಟದ ಮಾಲೀಕರಿಗೆ ಅಧಿಕ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ತಕ್ಷಣ ಪರಿಹಾರ ಒದಗಿಸಬೇಕು. ಗ್ರಾಮದಲ್ಲಿ ಹಗಲಿನಲ್ಲಿಯೇ ಕೆಲವು ವೇಳೆ ಈ ಕಾಡಾನೆಗಳ ತಂಡ ಗ್ರಾಮದ ರಸ್ತೆಯಲ್ಲಿ ಸಂಚರಿಸಿ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಮೂಡಿಸಿದೆ. ಅರಣ್ಯ ಇಲಾಖೆ ಗ್ರಾಮಸ್ತರ ಮನವಿಗೆ ಸ್ಪಂದಿಸಿ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಾನೆಗಳ ತಂಡ ಪಕ್ಕದ ನಾಗರಹೊಳೆ ಅಭಯಾರಣ್ಯದಿಂದ ಮಾಲ್ದಾರೆ ಸಿದ್ದಾಪುರ ಮಾರ್ಗವಾಗಿ ಐಮಂಗಲ ಗ್ರಾಮಕ್ಕೆ ಬಂದಿರಬಹುದೆಂದು ಗ್ರಾಮಸ್ಥರು ಶಂಕಿಸಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.