ಮಡಿಕೇರಿ, ಏ. 23: ಚೆರಿಯಪರಂಬುವಿನ ನುಸ್ರತುಲ್ ಅನಾಂ ಹಿಫ್ಲುಲ್ ಖುರ್‍ಆನ್ ಕಾಲೇಜಿನ 5ನೇ ಸ್ವಲಾತ್ ವಾರ್ಷಿಕ ಹಾಗೂ ಹಿಫ್ಲುಲ್ ಖುರ್‍ಆನ್ ಸನದುದಾನ ಮಹಾ ಸಮ್ಮೇಳನ ತಾ. 26 ಮತ್ತು 27 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಮುಖರು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಜುಮಾ ಮಸ್ಸಿದ್ ಅದೀನ ಸಂಸ್ಥೆಯಾದ ನುಸ್ರತುಲ್ ಅನಾಂ ರಿಲೀಫ್ ಸಮಿತಿ ಹಿಫ್ಲುಲ್ ಖುರ್‍ಆನ್ ಕಾಲೇಜಿನ ಸಾನಿದ್ಯದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯ 4 ವಿದ್ಯಾರ್ಥಿಗಳು ಖುರ್‍ಆನ್ ಕಂಠಪಾಠ ಮಾಡಿದ್ದು, ಆ ವಿದ್ಯಾರ್ಥಿಗಳಿಗೆ ಸನದುದಾನ ನೀಡಿ ಗೌರವಿಸುವ ಸಲುವಾಗಿ ಸನದುದಾನ ಮಹಾ ಸಮ್ಮೆಳನ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವನ್ನು ಹಲವಾರು ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಪ್ರಯುಕ್ತ ತಾ. 26 ರಂದು ಜುಮಾ ನಮಾಜಿನ ಬಳಿಕ ಚೆರಿಯಪರಂಬು ಮಖಾಂ ವಠಾರದಲ್ಲಿ ಧ್ವಜಾರೋಹಣ ಹಾಗೂ ಖಬರ್ ಝಿಯಾರತ್ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಕೇರಳದ ಪ್ರಖ್ಯಾತ ವಾಗ್ಮಿ ಡಾ. ಅಬ್ದುಸ್ಸಲಾಂ ಓಮಶೈರಿ ಅವರ ನೇತೃತ್ವದಲ್ಲಿ ಕುಟುಂಬ ಸಮ್ಮಿಲನ ನಡೆಯಲಿದೆ. ಅಂದು ರಾತ್ರಿ 7 ಗಂಟೆಗೆ ಕಾಸರಗೋಡಿನ ಪ್ರಖ್ಯಾತ ವಾಗ್ಮಿ ಹನೀಫ್ ನಿಝಾಮಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದು, ವೇದಿಕೆಯಲ್ಲಿ ಹಲವಾರು ಉಲಾಮ ಉಮರಾಗಳು ಭಾಗವಹಿಸಲಿದ್ದಾರೆ. ತಾ. 27 ರಂದು ಬೆಳಿಗ್ಗೆ 9 ಗಂಟೆಗೆ ಮಡಿಕೇರಿಯ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಒಳರೋಗಿಗಳ ಸಂದರ್ಶನ ಹಾಗೂ ಹಣ್ಣು ಹಂಪಲು ವಿತಣೆ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಗೆ ಖುರ್‍ಹಾನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ವಸ್ತ್ರ ವಿತರಣೆ ಹಾಗೂ ಖತ್‍ಮುಲ್ ಖುರ್‍ಆನ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಚೆರಿಯ ಪರಂಬು ಮಖಾಂ ವಠಾರದಲ್ಲಿ ಸನದುದಾನ ಮಹಾ ಸಮ್ಮೇಳನ ಹಾಗೂ ಸ್ವಲಾತ್ ವಾರ್ಷಿಕ ಹಾಗೂ ಊರಿನ ಉರುದು ದಾನಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ಕೂರಿಕುಝಿ ವಹಿಸಲಿದ್ದಾರೆ. ವೇದಿಕೆಯಲ್ಲಿ ಶಹೀದುದ್ದೀನ್ ಅಲ್‍ಬುಖಾರಿ ಮರ್ಕಝ ಸ್ಸಆದಃ ಶಿವಮೊಗ್ಗ, ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು, ಮಹ್‍ಮೂದ್ ಮುಸ್ಲಿಯಾರ್ ಎಡಪಾಲ, ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಪುತ್ತೂರು, ಮುನೀರ್ ಮಹ್‍ಲರಿ ಚೆರಿಯಪರಂಬು, ಬಸೀರ್ ಚೆರಿಯಪರಂಬು ಹಾಗೂ ಹಲವಾರು ಉಲಮಾ, ಉಮರಾ ಸಾದಾತುಗಳು ಉಪಸ್ಥಿತರಿರುವರು ಎಂದು ಪ್ರಮುಖರು ಮಾಹಿತಿ ನೀಡಿದರು.

ಸಂಸ್ಥೆಯ ಯೋಜನೆಗಳು: ಸಮಾಜದಲ್ಲಿ ಹಿಂದುಳಿದವರಿಗೆ, ಅನಾಥ ನಿರ್ಗತಿಕರಿಗೆ ಸಹಾಯ ಹಸ್ತ ನೀಡುವ ಮೂಲ ಉದ್ದೇಶದೊಂದಿಗೆ ಪ್ರಾರಂಭಿಸಿದ ಈ ಸಂಸ್ಥೆಯು ಹಲವು ಸಮುದಾಯ ಸೇವೆಗಳೊಂದಿಗೆ ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ನಿರ್ಗತಿಕರಿಗೆ ರಂಝಾನ್ ಕಿಟ್, ರೋಗಿಗಳಿಗೆ ಸಹಾಯ ಧನ, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯ ಮಾತ್ರವಲ್ಲದೆ ಕಳೆದ 3 ವರ್ಷದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಸ್ಥೆಯು ಸಂಪೂರ್ಣ ವೆಚ್ಚದಲ್ಲಿ ಲೌಕಿಕ ಶಿಕ್ಷಣದೊಂದಿಗೆ ಹಿಫ್ಳ್ ವಿದ್ಯಾಭ್ಯಾಸ ನೀಡುತ್ತಿದೆ. ದಾನಿಗಳ ನೆರವಿನಿಂದ ಈ ಕೇಂದ್ರವು ಅಚ್ಚುಕಟ್ಟಾಗಿ ನಡೆಯುತ್ತಿದ್ದು, 2018-19ನೇ ಸಾಲಿನಲ್ಲಿ 18 ವಿದ್ಯಾರ್ಥಿಗಳು ಹಿಫ್ಳ್ ವಿದ್ಯಾರ್ಜನೆಗೈಯ್ಯುತ್ತಿದ್ದು ಇದೀಗ 4 ವಿದ್ಯಾರ್ಥಿಗಳು ಹಾಫಿಝ್ ಗಳಾಗಿ ಹೊರಹೊಮ್ಮತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಹೆಚ್. ಬಶೀರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಉಸ್ತಾದ್ ಅಬ್ದುಲ್ ಮಜೀದ್, ಜುಬೈರ್, ಹಸೈನಾರ್ ಹಾಜಿ ಹಾಗೂ ಹನೀಫ್ ಉಪಸ್ಥಿತರಿದ್ದರು.