ಕುಶಾಲನಗರ, ಏ 23: ಕುಶಾಲನಗರ ಪಟ್ಟಣದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಕೆರೆಗಳು ಖಾಸಗಿಯವರ ಪಾಲಾಗಿದ್ದು ಕೆರೆಗಳ ಸಂರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದರೆ ತಪ್ಪಾಗಲಾರದು. ಪಟ್ಟಣದಲ್ಲಿರುವ ಸೋಮದೇವನ ಕೆರೆ, ಕುಂಬಾರಗುಂಡಿ ಕೆರೆ, ಗೌಡ ಸಮಾಜದ ಬಳಿಯ ಕೆರೆ ಸೇರಿದಂತೆ ಹಲವು ಕೆರೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.
ಈ ನಡುವೆ ಕುಶಾಲನಗರ ಮಡಿಕೇರಿ ರಸ್ತೆಯ ಹೆದ್ದಾರಿ ಬದಿಯಲ್ಲಿರುವ ಪುರಾತನ ತಾವರೆಕೆರೆ ಕಾಯಕಲ್ಪಕ್ಕೆ ಕಾಯುತ್ತಿದೆ. ಸುಮಾರು 3 ಎಕರೆ ವಿಸ್ತೀರ್ಣದಲ್ಲಿರುವ ಪಟ್ಟಣದ ಬೃಹತ್ ಕೆರೆ ಯಾವದೇ ಅಭಿವೃದ್ಧಿ ಇಲ್ಲದೆ ಪಾಳುಬೀಳುವದರೊಂದಿಗೆ ಅಕ್ರಮವಾಗಿ ಒತ್ತುವರಿಯಾಗುತ್ತಿರುವ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆ.
ವರ್ಷದ ಎಲ್ಲಾ ದಿನಗಳಲ್ಲಿ ನೀರಿನ ಸಂಗ್ರಹ ಕಂಡುಬರುತ್ತಿರುವ ಈ ಕೆರೆಗೆ ಬರುವ ಜಲಮೂಲಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಳ್ಳುವದರೊಂದಿಗೆ ನೀರಿನ ಹರಿವಿಗೆ ಅಡ್ಡಿಮಾಡುವದರೊಂದಿಗೆ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕೆರೆಯ ಅಭಿವೃದ್ಧಿ ಮತ್ತು ಹೂಳೆತ್ತುವ ಕಾಮಗಾರಿಯೊಂದು ನಡೆದಿದ್ದು ಕೊಡಗು ಜಿ.ಪಂ. ವತಿಯಿಂದ ಯೋಜನೆ ನಡೆದಿದ್ದರೂ ಈ ಅನುದಾನ ಬಹುತೇಕ ನೀರಿನಲ್ಲಿ ಹೋಮ ಹಾಕಿದಂತಾಗಿದೆ ಎನ್ನುವ ದೂರುಗಳು ಕೇಳಿಬಂದಿತ್ತು ಇಷ್ಟೆಲ್ಲದರ ನಡುವೆ ಕುಶಾಲನಗರ ಪ.ಪಂ. ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಕೆರೆಯನ್ನು ಮುಚ್ಚಿ ಖಾಸಗಿ ಬಡಾವಣೆಯೊಂದಕ್ಕೆ ಸಂಪರ್ಕ ರಸ್ತೆ ಕಲ್ಪಿಸಿದ್ದು ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರ ದೂರಿನ ಹಿನ್ನೆಲೆ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅದನ್ನು ತೆರವುಗೊಳಿಸಿ ಕೆರೆಯ ಅಸ್ತಿತ್ವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ನಿಟ್ಟಿನಲ್ಲಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೂ ಮುಂದಾಗಿ ರಸ್ತೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೆರೆ ಗಡಿ ಗುರುತಿಸುವ ಸರ್ವೆ ಕಾರ್ಯ ಕೂಡ ನಡೆದಿತ್ತು. ನಂತರ ಸ್ಥಳೀಯ ಕೆರೆ ಸಂರಕ್ಷಣಾ ಸಮಿತಿಯ ತಂಡ ಕೆರೆಯ ಸುತ್ತಲೂ ಬೆಳೆದಿದ್ದ ಬೃಹತ್ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡಿದ್ದರು. ಆದರೆ ಕೆರೆಯನ್ನು ರಕ್ಷಿಸಲು ಯಾವದೇ ರೀತಿಯ ಸಂರಕ್ಷಣಾ ಬೇಲಿ ಅಳವಡಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದು ಕೆರೆ ಸಂರಕ್ಷಣಾ ಸಮಿತಿಯ ಪ್ರಮುಖರು ದೂರಿದ್ದಾರೆ. ಈ ತಾವರೆಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಪಂ ಮತ್ತು ಕುಡಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತಾವರೆಕೆರೆಯ ಸುತ್ತಮುತ್ತಲೂ ಬಡಾವಣೆಗಳು ತಲೆ ಎತ್ತುತ್ತಿದ್ದು, ಈ ಮೂಲಕ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳು ಕಲುಷಿತ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದ್ದು, ಇದರಿಂದ ನೀರು ಸಂಪೂರ್ಣ ವಾಸನಾಯುಕ್ತವಾಗಿ ಪರಿವರ್ತನೆಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಕ್ರಮಕ್ಕೆ ಪಂಚಾಯಿತಿಗೆ ಸೂಚನೆ ನೀಡಿದರೂ ಯಾವದೇ ರೀತಿಯ ಕ್ರಮ ಕೈಗೊಳ್ಳದಿರುವದು ಈ ಆವಾಂತರಕ್ಕೆ ಕಾರಣವಾಗಿದೆ.
ಸಮೀಪದಲ್ಲಿರುವ ಬೃಹತ್ ವಾಣಿಜ್ಯ ಸಂಕೀರ್ಣಗಳಿಂದ ಕಲುಷಿತ ನೀರು ಕೆರೆಗೆ ಹರಿಸಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಸಂಬಂಧಿಸಿದ ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದು ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ. ಕೆರೆಯ ಮೇಲ್ಭಾಗದಲ್ಲಿ ನೀರು ಹರಿದು ಬರುತ್ತಿರುವ ಪ್ರದೇಶವನ್ನು ಕೆಲವು ಖಾಸಗಿ ವ್ಯಕ್ತಿಗಳು ಬೇಲಿ ಹಾಕುವದರೊಂದಿಗೆ ಅಕ್ರಮವಾಗಿ ಒತ್ತುವರಿ ಮಾಡಲು ಪ್ರಯತ್ನಿಸುತ್ತಿರುವದು ಸ್ಥಳಕ್ಕೆ ತೆರಳಿದ ‘ಶಕ್ತಿ’ ಪ್ರತಿನಿಧಿಗೆ ಕಂಡುಬಂತು.
ಕೆರೆಯನ್ನು ಅಭಿವೃದ್ಧಿಗೊಳಿಸಲು ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ. 1.5 ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಈ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದು ಇದುವರೆಗೆ ಯಾವದೇ ರೀತಿಯ ಪ್ರಕ್ರಿಯೆ ಕಂಡುಬಂದಿಲ್ಲ. ಪ್ರವಾಸಿ ಕೇಂದ್ರವನ್ನಾಗಿ ತಾವರೆಕೆರೆಯನ್ನು ರೂಪಿಸುವ ಈ ಯೋಜನೆ ನೆನೆಗುದಿಗೆ ಬಿದ್ದಿದ್ದು ತಾವರೆಕೆರೆ ತನ್ನ ಅಸ್ತಿತ್ವವನ್ನು ಉಳಿಸುವದರ ಜೊತೆಗೆ ಶಾಶ್ವತ ಕಾಯಕಲ್ಪಕ್ಕೆ ಕಾಯುತ್ತಿರುವಂತೆ ಭಾಸವಾಗುತ್ತಿದ್ದು ಕೂಡಲೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಾಗಿದೆ. - ಚಂದ್ರಮೋಹನ್