ವೀರಾಜಪೇಟೆ, ಏ. 23: ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುವ ಬೇತರಿ ಗ್ರಾಮದಲ್ಲಿ ಕಾವೇರಿ ಹೊಳೆ ನೀರಿಲ್ಲದೆ ಬರಡಾಗುತ್ತಿರುವದರಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ವೀರಾಜಪೇಟೆ ಪಟ್ಟಣಕ್ಕೆ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿಯೂ ಮಳೆ ಬೀಳದ್ದರಿಂದಲೂ ಬಿಸಿಲಿನ ಧಗೆಯಿಂದ ನಲುಗುತ್ತಿರುವ ವೀರಾಜಪೇಟೆ ಪಟ್ಟಣದ ಜನತೆಗೆ ನಿರಂತರ ನೀರು ಪೊರೈಸಲು ಪಟ್ಟಣ ಪಂಚಾಯಿತಿ ಬೇತರಿ ಗ್ರಾಮದ ಕಾವೇರಿ ಹೊಳೆಯನ್ನು ಅವಲಂಭಿಸಬೇಕಾಗಿದೆ.ಕಳೆದ 2001ಕ್ಕೂ ಮೊದಲೇ ಮಡಿಕೇರಿಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಉಸ್ತುವಾರಿಯಲ್ಲಿ ಸುಮಾರು ರೂ. 5.5 ಕೋಟಿ ವೆಚ್ಚದಲ್ಲಿ ವೀರಾಜಪೇಟೆ ಪಟ್ಟಣಕ್ಕೆ ನೀರು ಪೊರೈಕೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ವೀರಾಜಪೇಟೆಯಿಂದ ಸುಮಾರು 12 ಕಿ.ಮೀ. ಅಂತರದಲ್ಲಿನ ಬೇತರಿ ಗ್ರಾಮದ ಕಾವೇರಿ ಹೊಳೆಯಿಂದ ವೀರಾಜಪೇಟೆ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಹೊಸದಾಗಿ ನೀರು ಯೋಜನೆಯೊಂದನ್ನು ಕಾರ್ಯಗತಗೊಳಿಸಲಾಯಿತು. ಯೋಜನೆಯ ಕಾಮಗಾರಿ ಪೂರ್ಣಗೊಂಡು ನೀರು ಪೊರೈಕೆಯ ಆರಂಭದಲ್ಲಿಯೇ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಅದನ್ನು ಸರಿಪಡಿಸಿ ಪಟ್ಟಣಕ್ಕೆ ನೀರು ಪೊರೈಸಲು ಮತ್ತಷ್ಟು ವಿಳಂಬವಾಯಿತು. ಈ ನೀರು ಪೊರೈಕೆ ಹೊಸ ಯೋಜನೆಯಲ್ಲಿ ಕೆಲವು ಸ್ಥಳಗಳಲ್ಲಿ ಹಳೆಯ ಪೈಪುಗಳನ್ನು ಬಳಸಿದ್ದರಿಂದ ನೀರು ಸರಬರಾಜು ಸಮಯದಲ್ಲಿ ಪೈಪುಗಳು ನಿರಂತರವಾಗಿ ಒಡೆಯುತ್ತಿದ್ದುದರಿಂದ ಆಗಲೂ ಪಟ್ಟಣ ಪಂಚಾಯಿತಿ ನೀರು ಪೊರೈಕೆಯಲ್ಲಿ ಸಮಸ್ಯೆ ಎದುರಿಸುವಂತಾಯಿತು. ಯೋಜನೆಯ ಲೋಪ ದೋಷಗಳ ಪರಿಹಾರಕ್ಕಾಗಿ ಪೈಪುಗಳ ದುರಸ್ತಿ ಹೊಸ ಪೈಪುಗಳ ಅಳವಡಿಕೆಯಿಂದ ಇನ್ನಿತರ ದುರಸ್ತಿಯಿಂದ ಯೋಜನೆಯ ವೆಚ್ಚ ರೂಪಾಯಿ ಏಳೂವರೆ ಕೋಟಿಗೆ ಏರಿದರೂ ಇನ್ನು ಸಮರ್ಪಕ ನೀರು ಪೊರೈಸಲು ಪಟ್ಟಣ ಪಂಚಾಯಿತಿ ಹರಸಾಹಸ ಪಡುವಂತಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲಿನ ಜನತೆಗೆ ಸಮರ್ಪಕ ನಲ್ಲಿ ನೀರು ಪೊರೈಕೆಗಾಗಿ ಪಟ್ಟಣ ಪಂಚಾಯಿತಿ ಕಳೆದ 1956 ರಿಂದ ಇಂದಿನ ತನಕ ಏಳು ನೀರು ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಿದ್ದರೂ ಈ ತನಕ ನೀರು ಪೊರೈಕೆಯಲ್ಲಿ ಪರಿಹಾರ ಕಾಣಲು ಸಾಧ್ಯವಾಗಿಲ್ಲ. ಇಲ್ಲಿನ ಶಿವಕೇರಿಯಲ್ಲಿ ಆರ್ಧ ಶತಮಾನದ ಹಿಂದೆಯೇ ಭಾರೀ, ವಿಶಾಲವಾದ ಶುದ್ಧೀಕರಿಸುವ ನೀರಿನ ವ್ಯವಸ್ಥಿತ ಘಟಕವನ್ನು ಸ್ಥಾಪಿಸಲಾಗಿದ್ದು ಈಗಲೂ ಇದು ಕಾರ್ಯಾಚರಣೆಯಲ್ಲಿದೆ. ನೀರು ಶೇಖರಣಾ ಕೇಂದ್ರಗಳಾದ ಅರಸುನಗರ, ಅಯ್ಯಪ್ಪ ಬೆಟ್ಟ, ಮಲೆತಿರಿಕೆಬೆಟ್ಟ,

(ಮೊದಲ ಪುಟದಿಂದ) ಸುಂಕದಕಟ್ಟೆ, ನೆಹರೂ ನಗರ, ವೀರಾಜಪೇಟೆ ಪ್ರವಾಸಿ ಮಂದಿರದ ಪಕ್ಕದಲ್ಲಿ ನೀರು ಶೇಖರಣಾ ಕೇಂದ್ರಗಳನ್ನು ನಿರ್ಮಿಸಲಾಗಿದ್ದರೂ ಈ ಎಲ್ಲ ಕೇಂದ್ರಗಳಲ್ಲಿ ನೀರು ಭರ್ತಿಯಾಗಲು ಸಾಧ್ಯವೇ ಇಲ್ಲದಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಳೆದ 1956 ರಲ್ಲಿ ಕದನೂರು ಗ್ರಾಮದ ಕಾವೇರಿ ಹೊಳೆ ಬದಿಯಲ್ಲಿ ಸ್ಥಾಪಿಸಿದ್ದ ನೀರು ಪೊರೈಕೆ ಕೇಂದ್ರ 2000 ಇಸವಿಯವರೆಗೂ ಸುಸ್ಥಿತಿಯಲ್ಲಿದ್ದರೂ ಈ ಹರಿಯುವ ತೋಡಿನ ನೀರು ಬೆಳವಣಿಗೆಯನ್ನು ಕಾಣುತ್ತಿರುವ ವೀರಾಜಪೇಟೆ ಪಟ್ಟಣಕ್ಕೆ ಸಾಕಾಗುತ್ತಿರಲಿಲ್ಲ. ಇದರ ಜೊತೆಯಲ್ಲಿಯೇ ಬೇತರಿ ಗ್ರಾಮದ ಕಾವೇರಿ ಹೊಳೆಯ ಬದಿಯಲ್ಲಿಯೇ ಕುಡಿಯುವ ನೀರಿನ ಪೊರೈಕೆಯ ಕೇಂದ್ರವನ್ನು ಆರಂಭಿಸಲಾಯಿತು. ವೀರಾಜಪೇಟೆ ಪಟ್ಟಣದ ಜನತೆ ಬೇಸಿಗೆಯ ಧಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇನ್ನು ತಪ್ಪಲಿಲ್ಲವೆನ್ನಲಾಗಿದೆ. ಈಗ ಕದನೂರು ಗ್ರಾಮದ ಕಾವೇರಿ ಉಪ ಹೊಳೆಯೂ ಬತ್ತಿದೆ.

ಈಗ ಪಟ್ಟಣ ಪಂಚಾಯಿತಿ ಬಡಾವಣೆಗಳಿಗೆ ಆದ್ಯತೆಯ ಮೇರೆಗೆ ಎರಡು ದಿನಗಳಿಗೊಮ್ಮೆ ನೀರನ್ನು ಪೊರೈಸುತ್ತಿದೆ. ನೀರು ಪೊರೈಕೆ ಕೇಂದ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಾಗ ನಾಲ್ಕೈದು ದಿನಗಳು ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಕಾಣುವಂತಾಗಿದೆ. ವೀರಾಜಪೇಟೆ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಪೊರೈಸಲು ತಾಂತ್ರಿಕ ದೋಷ ಹಾಗೂ ಪೈಪುಗಳನ್ನು ದುರಸ್ತಿ ಪಡಿಸಲು ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದೆ.

ಚುನಾವಣೆ ಕಳೆದ ತಕ್ಷಣ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವದು. ಈಗಾಗಲೇ ಪಟ್ಟಣಕ್ಕೆ ವ್ಯವಸ್ಥಿತವಾಗಿ ನೀರು ಪೊರೈಸಲು ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಎಲ್ಲ ಬಡಾವಣೆಗಳಿಗೂ ಸಮರ್ಪಕವಾಗಿ ನೀರು ಪೊರೈಸಲಾಗುವದು ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಜೆ.ಡಿಎಸ್. ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಅವರು ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುವ ಕುರಿತು ಪ್ರತಿಕ್ರಿಯಿಸಿ ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದರೂ ಕೆಲವು ಲೋಪ ದೋಷಗಳಿಂದ ಪಟ್ಟಣಕ್ಕೆ ನೀರು ಪೊರೈಕೆಯಲ್ಲಿ ವ್ಯತ್ಯಯ ಕಂಡು ಬರುತ್ತಿದೆ.

ವೀರಾಜಪೇಟೆ ಪಟ್ಟಣಕ್ಕೆ ಶಾಶ್ವತವಾಗಿ, ಸಮರ್ಪಕವಾಗಿ ಕುಡಿಯುವ ನೀರನ್ನು ಪೊರೈಸಲು ಸದÀ್ಯದಲ್ಲಿಯೇ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗುವದು. ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಉನ್ನತ ಇಲಾಖೆ ಹಾಗೂ ಸಚಿವರೊಂದಿಗೆ ಮಾತುಕತೆ ಮಾಡಲಾಗಿದೆ.

- ಡಿ.ಎಂ. ರಾಜ್‍ಕುಮಾರ್, ವೀರಾಜಪೇಟೆ