ಗೋಣಿಕೊಪ್ಪಲು. ಏ. 23: ಇತ್ತೀಚೆಗೆ ಕಳತ್ಮಾಡು, ಹೊಸೂರು, ಬೆಟ್ಟಗೇರಿ ಹಾಗೂ ಹೊಸಕೋಟೆ ಗ್ರಾಮದಲ್ಲಿ ರಾತೋರಾತ್ರಿ, ಮರಗಳ್ಳತನ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳ ನೆರಳಿನಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದೆ.
ಗೋಣಿಕೊಪ್ಪಲುವಿನ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಗೊಂಡು ಅರಣ್ಯ ಇಲಾಖೆಯ ಕರ್ತವ್ಯ ಲೋಪದಿಂದಲೇ ಇಂತಹ ಪ್ರಕರಣ ಗಳು ಆಗಿಂದಾಗ್ಗೆ ನಡೆಯುತ್ತಿದ್ದು, ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ಇಲಾಖೆಗೆ ಒಪ್ಪಿಸಿದ್ದರೂ ಕೆಲವು ಆಮಿಷಗಳಿಗೆ ಒಳಗಾಗಿ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.
ಇದರಿಂದ ಹತ್ತು ದಿನದ ಒಳಗೆ ಆರೋಪಿಗಳನ್ನು ಬಂಧಿಸಬೇಕು ಹಾಗೂ ಕರ್ತವ್ಯ ನಿರ್ಲಕ್ಷತೆ ತೋರಿರುವ ಅರಣ್ಯ ಇಲಾಖೆ ಅಧಿಕಾರಿಯನ್ನು ಅಮಾನತುಗೊಳಿಸು ವಂತೆ ಆಗ್ರಹಿಸಿದ್ದಾರೆ.
ಕಳತ್ಮಾಡು, ಹೊಸೂರು, ಬೆಟ್ಟಗೇರಿ ಹಾಗೂ ಹೊಸಕೋಟೆ ಗ್ರಾಮದಲ್ಲಿ ನಿರಂತರ ಮರ, ಕಾಫಿ, ಕರಿಮೆಣಸು ಕಳ್ಳತನ ನಡೆಯುತ್ತಿದ್ದು, ಇದನ್ನು ಗ್ರಾಮಸ್ಥರು ಒಟ್ಟುಗೂಡಿ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದರು.
ತಾ. 20 ರಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬಿಳಿಬಣ್ಣದ ಇಂಡಿಕಾ ಕಾರನ್ನು ಅನುಮಾನ ಗೊಂಡು ಪರಿಶೀಲಿಸಿದಾಗ ಕಾರಿನಲ್ಲಿ ಅಂದಾಜು 20 ಸಿ.ಎಫ್.ಟಿ. ತೇಗದ ಮರದ ನಾಟಾಗಳು ಕಂಡು ಬಂದಿವೆ. ಚಾಲಕನನ್ನು ವಿಚಾರಿಸಿದಾಗ ಇದನ್ನು ಹೊಸಕೋಟೆ ಗ್ರಾಮದ ಕಾಫಿ ತೋಟದಿಂದ ಕದ್ದು ತರುತ್ತಿರುವದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಾರಿನಲ್ಲಿದ್ದವರು ನಾಪೋಕ್ಲು, ವೀರಾಜಪೇಟೆ ಹಾಗೂ ಹೊಸಕೋಟೆಯವರೆಂದು ಮೂವರು ವ್ಯಕ್ತಿಗಳು ತಿಳಿದುಬಂದಿದೆ.
ಈ ಸಂದರ್ಭ ಅಕ್ರಮ ಮರ ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದ ಗ್ರಾಮಸ್ಥರು, ವೀರಾಜಪೇಟೆ ಅರಣ್ಯ ಅಧಿಕಾರಿಗಳಾದ ದೇವಯ್ಯನವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ರ್ಯಾಪಿಡ್ ಫೋರ್ಸ್ ಆರು ಸಿಬ್ಬಂದಿಗಳು ಅಕ್ರಮ ಮರ ಸಾಗಾಟಗಾರರನ್ನು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.
ಆದರೆ ಆರೋಪಿಗಳು ಅಮ್ಮತ್ತಿ ದೇವರಕಾಡು ಬಳಿ ಮೂತ್ರ ವಿಸರ್ಜನೆಗೆ ಹೋಗುವದಾಗಿ ತಿಳಿಸಿ ಅಲ್ಲಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪ್ಪಿಸಿಕೊಂಡಿದ್ದಾರೆ.
ಇದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಅಧಿಕಾರಿಯನ್ನು ಅಮಾನತುಪಡಿಸಬೇಕು ಹಾಗೂ ಮರ ಕಳ್ಳ ಸಾಗಾಣಿಕೆ ಮಾಡಿದವರನ್ನು ಪತ್ತೆ ಹಚ್ಚಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ವೀರಾಜಪೇಟೆಯ ಅರಣ್ಯ ಕಛೇರಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಸಿದ್ದಾರೆ.
ಸಭೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಸಂಚಾಲಕ, ಮಂಡೇಪಂಡ ಪ್ರವೀಣ್, ಮುಖಂಡರಾದ ಸೋಮೆಯಂಗಡ ಗಣೇಶ್, ಮಲ್ಲೆಂಗಡ ಸುಬ್ರಮಣ್ಯ, ಬೋಡಂಗಡ ಅಶೋಕ್, ಮನೆಯಪಂಡ ಗೌತಮ್ ಮುಂತಾದವರು ಉಪಸ್ಥಿತರಿದ್ದರು.