ಸೋಮವಾರಪೇಟೆ, ಏ. 23: ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಕಲುಷಿತ ನೀರು ರಸ್ತೆ ಹಾಗೂ ಚರಂಡಿಯಲ್ಲಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ.

ಬಸ್ ನಿಲ್ದಾಣದ ಶೌಚಾಲಯದ ನೀರನ್ನು ಪಟ್ಟಣದ ಕ್ಲಬ್ ರಸ್ತೆಯಲ್ಲಿ ಹರಿಯ ಬಿಡಲಾಗುತ್ತಿದ್ದು, ಇಡೀ ಪ್ರದೇಶ ಗಬ್ಬು ವಾಸನೆಯಿಂದ ಕೂಡಿರುತ್ತದೆ. ಪರಿಣಾಮ ಸುತ್ತಮುತ್ತಲಿನ ವರ್ತಕರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿ ಕೊಂಡು ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಶೌಚಾಲಯದ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಶೌಚಾಲಯದ ಕೊಳಚೆ ನೀರು ಶೇಖರಣೆಯಾಗುವ ಗುಂಡಿ ಆಗಾಗ್ಗೆ ತುಂಬಿಕೊಳ್ಳುತ್ತಿರುವ ದರಿಂದ ರಸ್ತೆ ಹಾಗೂ ಚರಂಡಿಗೆ ಹರಿಯ ಬಿಡಲಾಗುತ್ತಿದೆ. ಪಟ್ಟಣ ಪಂಚಾಯಿತಿಯ ‘ಸಕ್ಕಿಂಗ್ ಮೆಷಿನ್’ ನಿಂದ ಈ ಹಿಂದೆ ಗುಂಡಿಯನ್ನು ಖಾಲಿ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಕ್ರಮಕ್ಕೆ ಮುಂದಾಗದೇ ಇರುವದರಿಂದ ಇಡೀ ಪ್ರದೇಶ ದುರ್ಗಂಧಮಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಶೌಚಾಲ ಯದ ನೀರನ್ನು ರಾತ್ರಿ ವೇಳೆ ಯಲ್ಲಿ ಚರಂಡಿಗೆ ಬಿಡಲಾಗುತ್ತಿದ್ದು, ಮಳೆ ಬಂದರೆ ಹಗಲು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಲಬ್ ರಸ್ತೆಗೆ ಹೊಂದಿಕೊಂಡಿರುವ ಚರಂಡಿಯ ಮೇಲ್ಬಾಗಕ್ಕೆ ಸ್ಲ್ಯಾಬ್ ಅಳವಡಿಸಿಲ್ಲ. ಪಟ್ಟಣ ಪಂಚಾಯಿತಿಯವರಿಗೆ ಪುಕಾರು ಸಲ್ಲಿಸಿದ್ದರೂ ಇದುವರೆಗೂ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.