ಮಡಿಕೇರಿ, ಏ. 23: ಇರುವದೊಂದೇ ಭೂಮಿ ಇದನ್ನು ಸಂರಕ್ಷಿಸಿ ಸಂಪೋಷಿಸಲು ನಾವೆಲ್ಲರೂ ಪ್ರಯತ್ನಿಸೋಣ. ಜಾಗತಿಕ ತಾಪಮಾನದಿಂದ ಉರಿಯುತ್ತಿರುವ ಭೂಮಿಯನ್ನು ತಂಪಾಗಿಸೋಣ ಎಂದು ಸಮನ್ವಯ ಶಿಕ್ಷಣ ಜಿಲ್ಲಾ ಸಂಯೋಜಕರಾದ ಹೆಚ್.ಎಂ. ವೆಂಕಟೇಶ ಕಿವಿಮಾತು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ, ಸೋಮವಾರಪೇಟೆ ತಾಲ್ಲೂಕು ಬಿ.ಆರ್.ಸಿ. ಕೇಂದ್ರ ಇವರ ವತಿಯಿಂದ ಕುಶಾಲನಗರ ಹೋಬಳಿ ನಂಜರಾಯಪಟ್ಟಣ ಕ್ಲಸ್ಟರ್ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಎಂಬ ಶೀರ್ಷಿಕೆಯಡಿ ವಿಶ್ವ ಭೂ ದಿನದ ಅಂಗವಾಗಿ ಸರ್ಕಾರಿ ಪ್ರಾಯೋಜಿತ ಬೇಸಿಗೆ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಎಚ್.ಕೆ. ಕುಮಾರ್ ಮಾತನಾಡಿ ಐದು ವಾರಗಳವರೆಗೆ ಬೇಸಿಗೆ ಶಿಬಿರ ನಡೆಯಲಿದ್ದು. ಮಕ್ಕಳು ದಿನನಿತ್ಯ ತಪ್ಪಿಸಿಕೊಳ್ಳದೆ ಶಾಲೆಗೆ ಬರಬೇಕು. ಶಿಕ್ಷಕರು ನೀಡುವ ಮಾಹಿತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕರಾದ ಕುಮಾರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಕರಾದ ಚೇತನ್ ಮತ್ತು ಕ್ಲಸ್ಟರ್ ಸಿ.ಆರ್.ಪಿ. ಸತ್ಯನಾರಾಯಣ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಸುರೇಶ್ ಸ್ವಾಗತಿಸಿ, ವಂದಿಸಿದರು.