ಕೂಡಿಗೆ, ಏ. 24: ಕೂಡಿಗೆ ಕ್ರೀಡಾಪ್ರೌಢಶಾಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ)ದಲ್ಲಿ ಹಾಕಲಾಗಿದ್ದ ಕೃತಕ ಹುಲ್ಲಿನ ಹಾಸು ಭಾರೀ ಗಾಳಿ-ಮಳೆಗೆ ಹಾರಿಹೋಗಿರುವ ಘಟನೆ ನಡೆದಿದೆ.
ಹಾಕಿ ಟರ್ಫ್ ಕಾಮಗಾರಿಯೂ ಕಳೆದ ನಾಲ್ಕು ವರ್ಷಗಳಿಂದಲೂ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯನ್ನು ಮನಬಂದಂತೆ ನಿರ್ವಹಿಸುತ್ತಿರುವ ಗುತ್ತಿಗೆದಾರ ಕಳೆದ ತಿಂಗಳು ಹಾಕಿ ಟರ್ಫ್ ಶೀಟ್‍ಗಳನ್ನು ಗಮ್ ಹಾಕದೆ ತಾತ್ಕಾಲಿಕವಾಗಿ ಮೈದಾನಕ್ಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ ಕೂಡಿಗೆ ವ್ಯಾಪ್ತಿಯಲ್ಲಿ ಬೀಸಿದ ಗಾಳಿ ಮತ್ತು ಮಳೆಗೆ ಇವುಗಳು ಹಾರಿಹೋಗಿವೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ಕಾಮಗಾರಿಯನ್ನು ನಿರ್ವಹಿಸಲು ಆದೇಶಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ.