ಮಡಿಕೇರಿ, ಏ. 25: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣ ವಾಗುವಲ್ಲಿ ಗೋಕಾಕ್ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಡಾ. ರಾಜ್ಕುಮಾರ್ ಅವರ 91ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೋಕಾಕ್ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಗೋಕಾಕ್ ವರದಿ ಅನುಷ್ಠಾನಕ್ಕೆ ಡಾ. ರಾಜ್ಕುಮಾರ್ ಅವರು ಶ್ರಮಿಸಿದ್ದರು. ಡಾ. ರಾಜ್ಕುಮಾರ್ ನಟನೆ, ಅಭಿನಯ, ಗಾಯನ, ಯೋಗಾಸನ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಅಪರೂಪದ ಮೇರು ನಟ ಎಂದು ಅವರು ಬಣ್ಣಿಸಿದರು. ಡಾ. ರಾಜ್ಕುಮಾರ್ ಅವರು ಏಕಾಗ್ರತೆ, ಸಮಯ ಪ್ರಜ್ಞೆಯಿಂದ ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ ಸಾಧನೆ ಅಪಾರ ಎಂದು ಬಣ್ಣಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ, ಡಾ. ರಾಜ್ಕುಮಾರ್ ಅಭಿನಯದ ಸತ್ಯಹರಿಶ್ಚಂದ್ರ, ಕವಿರತ್ನ ಕಾಳಿದಾಸ ಮತ್ತಿತರ ಚಿತ್ರಗಳು ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಅಭಿಮಾನ, ಭಾಷೆ ಬೆಳವಣಿಗೆಗೆ ಇವರ ಕೊಡುಗೆ ಅಪಾರ ಎಂದರು.
ಡಾ. ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ, ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿವೆ ಎಂದು ಅವರು ತಿಳಿಸಿದರು. ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಹೊರ ರಾಜ್ಯದಿಂದ ಬಂದವರಿಗೆ ಕನ್ನಡ ಭಾಷೆ ಕಲಿಯು ವಂತಾಗಲು ಡಾ. ರಾಜ್ಕುಮಾರ್ ಅವರ ಸಿನಿಮಾಗಳು ಪ್ರೇರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಪ ವಿಭಾಗಾಧಿಕಾರಿ ಟಿ. ಜವರೇ ಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಂದ, ಜಿಲ್ಲಾ ಖಜಾ ನಾಧಿಕಾರಿ ಸತೀಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್ ಇತರರು ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.