*ಗೋಣಿಕೊಪ್ಪಲು, ಏ. 25: ಕೇರಳದ ಕಣ್ಣಾನೂರಿನಿಂದ ಮೈಸೂರಿಗೆ ಪ್ರವಾಸ ತೆರಳುತ್ತಿದ್ದ ಟಿಟಿ (ಕೆಎಲ್59-ಎನ್.7247) ವಾಹನವೊಂದು ತಿತಿಮತಿ ಬಳಿ ಅಪಘಾತಕ್ಕೀಡಾಗಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಕಣ್ಣಾನೂರಿನಿಂದ 12 ಜನ ಪ್ರಯಾಣಿಕರಿದ್ದ ವಾಹನ ತಿತಿಮತಿ ಪೊಲೀಸ್ ಠಾಣೆ ಬಳಿ ಹೆದ್ದಾರಿಗೆ ಅಳವಡಿಸಿರುವ ಬ್ಯಾರಿಕೇಡ್‍ನ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಇದರಿಂದ ಪಕ್ಕದಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ. ವಿದ್ಯುತ್ ತಂತಿ ತುಂಡಾದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಅನಾಹುತ ತಪ್ಪಿದೆ.
ಅಪಘಾತ ಸಂಭವಿಸಿದ ಕೂಡಲೆ ವಾಹನ ಚಾಲಕ ಸುಜನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯರು ತಿತಿಮತಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ತಿತಿಮತಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.