ಸೋಮವಾರಪೇಟೆ, ಏ. 25: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಟ್ರ್ಯಾಕ್ಟರ್‍ನ ಮಾಲೀಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಮೀಪದ ಕಾರೇಕೊಪ್ಪ-ಯಡವನಾಡು ಮಧ್ಯದ ಹೆದ್ದಾರಿಯಲ್ಲಿ ಸಂಭವಿಸಿದೆ.ಹುದುಗೂರು ಗ್ರಾಮದ ರಾಜೇಗೌಡ (55) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಇಂದು ಅಪರಾಹ್ನ 2.30ರ ಸುಮಾರಿಗೆ ಕಾರೇಕೊಪ್ಪದಿಂದ ಹುದುಗೂರು ಕಡೆಗೆ ತಮ್ಮದೇ ಟ್ರ್ಯಾಕ್ಟರ್‍ನಲ್ಲಿ ಸಗಣಿ ಗೊಬ್ಬರವನ್ನು ಸಾಗಿಸುತ್ತಿದ್ದರು. ತಂಗವೇಲು ಎಂಬಾತ ಚಾಲಿಸುತ್ತಿದ್ದ ಟ್ರ್ಯಾಕ್ಟರ್, ಕಾರೇಕೊಪ್ಪದ ಅರಣ್ಯದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಹಿಂಬದಿಯ ಟ್ರಾಲಿ ಮಗುಚಿಕೊಂಡಿದೆ.(ಮೊದಲ ಪುಟದಿಂದ) ಈ ಸಂದರ್ಭ ರಾಜೇಗೌಡ ಅವರು ಕೆಳಗೆ ಬಿದ್ದಿದ್ದು, ಅವರ ತಲೆ ಮೇಲೆ ಟ್ರಾಲಿ ಬಿದ್ದಿದೆ. ಟ್ರ್ಯಾಕ್ಟರ್ ಅವಘಡ ನಡೆದ ಸಂದರ್ಭ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ತಕ್ಷಣ ಟ್ರಾಲಿಯನ್ನು ಮೇಲೆತ್ತಿದ್ದಾರೆ. ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ರಾಜೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ತಂಗವೇಲು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತ ರಾಜೇಗೌಡ ಅವರು ನೂತನವಾಗಿ ಮನೆ ನಿರ್ಮಿಸುತ್ತಿದ್ದು, ಒಂದೆರಡು ತಿಂಗಳಿನಲ್ಲಿ ಗೃಹಪ್ರವೇಶಕ್ಕೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಮೃತರು ಪತ್ನಿ ಸುಶೀಲ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.