ಮಡಿಕೇರಿ, ಏ. 25: ಅಪರಿಚಿತ ಮಹಿಳೆ ಹಾಗೂ ಪುರುಷ ಕಕ್ಕಬೆ ಯವಕಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಅಕ್ಕಿ ಕೊಂಡೊಯ್ದಿರುವದಲ್ಲದೆ ಮತ್ತೊಂದು ಮನೆಯಲ್ಲಿ ಮನೆಯಾಕೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದು, ಆ ಮಹಿಳೆ ಹಾಗೂ ಪುರುಷ ನಕ್ಸಲರು ಎಂಬ ಶಂಕೆಯ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಇಂದು ಬೆಳಿಗ್ಗೆ ಯವಕಪಾಡಿಗೆ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಆಗಮಿಸಿ ಮನೆಯೊಂದ ರಿಂದ ಸುಮಾರು 15 ಕೆ.ಜಿ.ಯಷ್ಟು ಅಕ್ಕಿಯನ್ನು ತೆಗೆದುಕೊಂಡು ಸಮೀಪದ ಮತ್ತೊಂದು ಮನೆಯತ್ತ ತೆರಳಿ ಅಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆ ಯೊಬ್ಬರಿಂದ ಮೊಬೈಲ್ ಕಸಿದು ಕೊಂಡು, ‘ನಾವು ಬಂದಿದನ್ನು ಯಾರಿಗಾದರೂ ಹೇಳಿದರೆ ಕೊಲ್ಲುವದಾಗಿಯೂ’ ಬೆದರಿಕೆ ಹಾಕಿದ್ದಾರೆ.ಬಳಿಕ ಅಕ್ಕಿ ಹಾಗೂ ಮೊಬೈಲ್ ನೊಂದಿಗೆ ಅಲ್ಲಿಂದ ಕಾಲ್ಕಿತ್ತ ಆ ಇಬ್ಬರು ಅಪರಿಚಿತರು ಒಂದು ಕಿ.ಲೋ. ಮೀಟರ್ ಅತರದಲಿ ಮೊಬೈಲನ್ನು ಎಸೆದು ಪರಾರಿಯಾದರು ಎಂಬ ಸುದ್ದಿ ಎಲ್ಲೆಡೆ ಹರಡಿ, ಇಡೀ ಯವಕಪಾಡಿ ಗ್ರಾಮವೇ ಆತಂಕಕ್ಕೊಳಗಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ್ದ ಆ ಅಪರಿಚಿತರು ನಕ್ಸಲರೆಂಬ ಶಂಕೆ ಯವಕಪಾಡಿ ಸುತ್ತ ಮುತ್ತ ವ್ಯಕ್ತಗೊಂಡಿತ್ತು.
(ಮೊದಲ ಪುಟದಿಂದ) ಎಸ್ಪಿ ಪ್ರತಿಕ್ರಿಯೆ: ಈ ಪ್ರಕರಣದ ಕುರಿತು ತನಿಖೆ ಕೈಗೊಂಡ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಯ ಬಳಿಕ ಎಸ್ಪಿ ಡಾ. ಸುಮನ್ ಈ ಕೆಳಗಿನಂತೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಸಮಯ 10.30 ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡು ಪರಾರಿಯಾದ ಸುಮಾರು 40 ವರ್ಷ ಪ್ರಾಯದ ಪುರುಷ ಹಾಗೂ ಮಹಿಳೆ ನಕ್ಸಲರಾಗಿರಬಹುದೆಂದು ಮಾಹಿತಿ ಬಂದ ಮೇರೆ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲ್ ನಿಗ್ರಹ ದಳದವರೊಂದಿಗೆ ಗ್ರಾಮದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದ್ದು, ನಕ್ಸಲರ ಸುಳಿವು ಕಂಡುಬಂದಿಲ್ಲ.
ದೂರು ನೀಡಿದ ಮಹಿಳೆಯ ಬಳಿ ನಕ್ಸಲರ ಭಾವ ಚಿತ್ರಗಳನ್ನು ತೋರಿಸಲಾಗಿದ್ದು, ಈ ದಿನ ಆಕೆಯ ಮನೆಗೆ ಬಂದು ವ್ಯಕ್ತಿಗಳಿಗೂ, ನಕ್ಸಲರ ಭಾವ ಚಿತ್ರಗಳಿಗೂ ಹೋಲಿಕೆಯಾಗಿಲ್ಲ. ಆ ವ್ಯಕ್ತಿಗಳು ನಕ್ಸಲರು ಧರಿಸುವ ಸಮವಸ್ತ್ರದಲ್ಲಿಲ್ಲದೆ ಪ್ಯಾಂಟ್, ಶರ್ಟ್ ಹಾಗೂ ಚೂಡಿದಾರ್ ಧರಿಸಿದ್ದುದಾಗಿ ತಿಳಿದು ಬಂದಿದೆ ಹಾಗೂ ಅವರುಗಳ ಬಳಿ ಯಾವದೇ ಆಯುಧಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ನಂತರ ಅಕ್ಕಪಕ್ಕದ ಮನೆಗಳಲ್ಲಿ ವಿಚಾರಿಸಿಕೊಂಡು ಅವರುಗಳು ಹೋದ ದಾರಿಯಲ್ಲಿ ಹೋದಾಗ ಸುಮಾರು 80 ಮೀಟರ್ ದೂರದಲ್ಲಿ ಆ ಹೆಂಗಸಿನ ಮೊಬೈಲ್ ಬಿದ್ದು ಸಿಕ್ಕಿದ್ದು, ಮುಂದುವರೆದು ಅದೇ ದಾರಿಯಲ್ಲಿ ಸುಮಾರು 400 ಮೀಟರ್ ದೂರಕ್ಕೆ ಆ ದಾರಿಯು ಅಂತ್ಯಗೊಂಡಿದ್ದು, ಮುಂದೆ ಯಾವದೇ ದಾರಿ ಇರುವದಿಲ್ಲ.
ಮತ್ತೊಬ್ಬ ಬ್ಯಕ್ತಿಯು ತನ್ನ ಮನೆಯಿಂದ 15 ಕೆ.ಜಿ. ಅಕ್ಕಿಯನ್ನು ತೆಗೆದುಕೊಂಡು ಹೋಗಿರುವದಾಗಿ ತಿಳಿಸಿದ್ದು, ಆತನ ಮನೆಯನ್ನು ಪರಿಶೀಲಿಸಲಾಗಿ ಅಕ್ಕಿಯನ್ನು ತೆಗೆದುಕೊಂಡು ಹೋದ ಬಗ್ಗೆ ಯಾವದೇ ಕುರುಹುಗಳು ಕಂಡು ಬಂದಿಲ್ಲ. ಈ ಬಗ್ಗೆ ಸ್ಥಳೀಯ ರನ್ನು ವಿಚಾರಿಸಲಾಗಿ ಯಾರೂ ಸಹ ಅಕ್ಕಿ ತೆಗೆದುಕೊಂಡು ಹೋಗಿರುವದನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲ್ ನಿಗ್ರಹ ದಳದವರೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲಿಸುತ್ತಿದ್ದು, ಈ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯ ಬಗ್ಗೆಯೂ ಕೂಲಂಕಶವಾಗಿ ಪರಿಶೀಲನೆ ನಡೆಸಲಾಗುತ್ತಿದೆ.