ಮಡಿಕೇರಿ, ಏ. 25: ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆಗೆ ಹಾನಿ ಉಂಟು ಮಾಡುತ್ತಿದ್ದ ಸಂದರ್ಭ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಯುಜಿಡಿ ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಸೂಚಿಸಿದ ಘಟನೆ ನಡೆಯಿತು.ನಗರದ ಅರವಿಂದ್ ಮೋಟಾರ್ಸ್ ಮುಂಭಾಗದ ಕಾಂಕ್ರಿಟ್ ರಸ್ತೆಯಲ್ಲಿ ಇಂದು ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕಾಂಕ್ರಿಟ್ ರಸ್ತೆಯನ್ನು ‘ವೈಬ್ರೇಟರ್’ ಯಂತ್ರ ಬಳಸಿ ನಾಶಗೊಳಿಸುವ ಮುನ್ನ 4 ಇಂಚು ಆಳ ರಸ್ತೆ ಸೀಳುವ ಬದಲು ಕೇವಲ 1 ಇಂಚು ಮಾತ್ರ ಸೀಳಿ ಕಾಂಕ್ರಿಟ್ ರಸ್ತೆಗೆ ಹಾನಿ ಉಂಟು ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಕೆಲ ನಾಗರಿಕರು ರಸ್ತೆ ಹಾನಿ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಅವರನ್ನು ಭೇಟಿ ಮಾಡಿದ ನಂತರ ರಂಜನ್ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಕಾಂಕ್ರಿಟ್ ರಸ್ತೆಗೆ ತೀವ್ರ ಹಾನಿಯಾಗ ಲಿರುವ ಸಾಧ್ಯತೆಯನ್ನು ಗಮನಿಸಿದ ಶಾಸಕರು ಸ್ಥಳದಲ್ಲಿದ್ದ ಯುಜಿಡಿ ಅಧಿಕಾರಿ ಹಾಗೂ ಗುತ್ತಿಗೆದಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಯುಜಿಡಿ (ಮೊದಲ ಪುಟದಿಂದ) ಕಾಮಗಾರಿಯ ಹೆಸರಿನಲ್ಲಿ ಮಡಿಕೇರಿಯಲ್ಲಿರುವ ಎಲ್ಲಾ ರಸ್ತೆಗಳನ್ನು ಹಾಳುಗೆಡವಿದ್ದೀರಿ, ಎಷ್ಟೇ ಸೂಚನೆ ಕೊಟ್ಟರೂ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸುತ್ತಾ ನನ್ನ ಹೆಸರನ್ನು ಹಾಳು ಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಎಂದು ಸೂಚಿಸಿದರು.

ಈ ಸಂದರ್ಭ ಕಾಮಗಾರಿ ಸ್ಥಗಿತಗೊಳಿಸುವದರ ಜೊತೆಗೆ ಪ್ರಸ್ತುತ ಹಾಳುಗೆಡವಿರುವ ರಸ್ತೆಯನ್ನು ಎರಡು ದಿನಗಳ ಒಳಗಾಗಿ ಕಾಂಕ್ರಿಟ್ ಬಳಸಿ ಸರಿಪಡಿಸುವದಾಗಿ ಸಂಬಂಧಿಸಿದ ಅಧಿಕಾರಿ ಲಿಖಿತ ಭರವಸೆ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದರಿಂದ ಕೆಯುಡಬ್ಲ್ಯೂಎಸ್ ಅಂಡ್ ಡಿಬಿ ಉಪವಿಭಾಗದ ಸಹಾಯಕ ಅಭಿಯಂತರ ಜೀವನ್ ಅವರು ಎರಡು ದಿನದೊಳಗೆ ರಸ್ತೆಯನ್ನು ಸರಿ ಮಾಡಿಕೊಡುವದಾಗಿ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಿದರು. ಈ ಸಂದರ್ಭ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸದಸ್ಯ ಉಣ್ಣಿಕೃಷ್ಣ, ಟೌನ್‍ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಜಗದೀಶ್, ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷರಾದ ಜಿ. ಚಿದ್ವಿಲಾಸ್, ಉದ್ಯಮಿ ಪ್ರಶಾಂತನ್ ಮತ್ತಿತರರು ಇದ್ದರು.