ಕುಶಾಲನಗರ, ಏ. 25: ತನ್ನ ವಾಸದ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಯೋರ್ವಳನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಗೀತಾ (40) ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ತನ್ನ ಮನೆಯಲ್ಲಿಯೇ ಬೇರೆ ಬೇರೆ ಕಡೆಗಳಿಂದ ಹೆಂಗಸರನ್ನು ಅಕ್ರಮವಾಗಿ ಕರೆಯಿಸಿಕೊಂಡು ಪರ ಊರಿನ ಪುರುಷ ಗಿರಾಕಿಗಳೊಂದಿಗೆ ಹಣಕ್ಕಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿರುವ ಪೊಲೀಸರು ಗೀತಾಳನ್ನು ಬಂಧಿಸಿದ್ದಾರೆ.ಎಸ್ಪಿ ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಿಯಕುಮಾರ್, ಕೆ.ಸಿ. ಸವಿತಾ, ಸುದೀಶ್ ಕುಮಾರ್, ಸಂಪತ್ ರೈ, ಚಾಲಕ ಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.