ಶನಿವಾರಸಂತೆ, ಏ. 25: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಮಣಗಲಿ ಗ್ರಾಮದ ಮೇಘಾನಂದ ಎಂಬಾತ ತನ್ನ ಖರ್ಚಿಗೆ ಹಣ ಕೊಡುತ್ತಿಲ್ಲ ಎಂದು ತನ್ನ ತಂದೆ ಎಂ.ಕೆ. ಪುಟ್ಟಸ್ವಾಮಿ ಬೈಕ್‍ನಲ್ಲಿ ಹೋಗುತ್ತಿ ದ್ದಾಗ, ಹಿಂಬದಿಯಿಂದ ಸ್ವಿಫ್ಟ್ ಕಾರಿನಲ್ಲಿ ಡಿಕ್ಕಿ ಪಡಿಸಿ ಸಾಯಿಸಲು ಯತ್ನಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮಣಗಲಿ ಗ್ರಾಮದ ಎಂ.ಕೆ. ಪುಟ್ಟಸ್ವಾಮಿ ತನ್ನ ಮಗ ಮೇಘಾನಂದ ಮತ್ತು ಸೊಸೆಯೊಂದಿಗೆ ವ್ಯವಸಾಯ ವೃತ್ತಿ ಮಾಡಿಕೊಂಡು ವಾಸವಿದ್ದಾರೆ. ಮಗ ತನಗೆ ಹಣಕಾಸು ನೀಡುವಂತೆ ತಂದೆಯನ್ನು ಪೀಡಿಸಿ ಆಗಾಗ ಜಗಳವಾಡುತ್ತಿದ್ದನೆಂದು ಹೇಳಲಾಗಿದೆ. ಬುಧವಾರ (ಮೊದಲ ಪುಟದಿಂದ) ಸಂಜೆ ತಂದೆ ಪುಟ್ಟಸ್ವಾಮಿ ತನ್ನ ಬೈಕ್ (ಕೆಎ 18 ಹೆಚ್ 4698)ನಲ್ಲಿ ಊರಿನ ರಸ್ತೆಯಲ್ಲಿ ಹೋಗುತ್ತಿರುವಾಗ ಮೇಘಾನಂದ ತನ್ನ ಸ್ವಿಫ್ಟ್ ಕಾರಿನಲ್ಲಿ (ಕೆಎ 18 ಎಂ 4698) ತಂದೆಯನ್ನು ಹಿಂಬಾಲಿಸಿಕೊಂಡು ಹೋಗಿ ಕೂಗಿ ಕರೆದು ‘ನೀನು ನನಗೆ ಹಣ ಕೊಡಲೇ ಬೇಕಾಗುತ್ತದೆ, ನಿನ್ನನ್ನು ಇದೇ ಕಾರಿನಲ್ಲಿ ಗುದ್ದಿ ಸಾಯಿಸುತ್ತೇನೆ’ ಎಂದು ಹೇಳಿ ಕಾರನ್ನು ಬೈಕಿಗೆ ಡಿಕ್ಕಿಪಡಿಸಿದ್ದಾನೆ. ಕೆಳಗಡೆ ಬಿದ್ದ ತಂದೆಯ ತಲೆ, ಸೊಂಟಕ್ಕೆ ಗಾಯವಾಗಿದೆ. ಮತ್ತೆ ಕಾರನ್ನು ಬೈಕಿನ ಮೇಲೆ ಹತ್ತಿಸಿ ಜಖಂಗೊಳಿಸಿದ್ದಾನೆ.

ಊರಿನ ಕೆಲವರು ಗಾಯಾಳುವನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯನ್ನು ಶನಿವಾರಸಂತೆ ಠಾಣಾಧಿಕಾರಿ ತಿಮ್ಮಶೆಟ್ಟಿ ಪಡೆದು ಪ್ರಕರಣ ದಾಖಲಿಸಿ, ಇಂದು ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್, ಹರೀಶ್, ಶಫೀರ್, ಈರಪ್ಪ ಪಾಲ್ಗೊಂಡಿದ್ದರು.