ಶನಿವಾರಸಂತೆ, ಏ. 27: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಂಡು ಮನುಷ್ಯನಿಗೆ ಹರಡುವ ವಿವಿಧ ರೀತಿಯ ಖಾಯಿಲೆಗಳ ಬಗ್ಗೆ ಜನರು ಜಾಗೃತಿ ಗೊಂಡರೆ ಮಲೇರಿಯ ಕಾಯಿಲೆ ಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣನಂದ್ ಅಭಿಪ್ರಾಯಪಟ್ಟರು. ವಿಶ್ವ ಮಲೇರಿಯಾ ದಿನದ ಅಂಗವಾಗಿ ಆಲೂರು ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮಲೇರಿಯಾ ಹೆಣ್ಣು ಸೊಳ್ಳೆಯಿಂದ ಹರಡುವ ಖಾಯಿಲೆಯಾಗಿದೆ. ಮಲೇರಿಯಾ ಕಾಯಿಲೆ ಹರಡುವ ಸೊಳ್ಳೆ ವ್ಯಕ್ತಿಗೆ ಕಚ್ಚಿದ ನಂತರದ ದಿನದಲ್ಲಿ ವ್ಯಕ್ತಿಗೆ ಬಿಟ್ಟುಬಿಟ್ಟು ಜ್ವರ ಬರು ವದು, ಚಳಿ ಜ್ವರ ಕಾಣಿಸಿಕೊಳ್ಳುವದು, ಜ್ವರದ ಮಧ್ಯದಲ್ಲೆ ಅಧಿಕ ಬೆವರು ಬರುವದು ಮಲೇರಿಯಾದ ಲಕ್ಷಣಗಳಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿ ತಡ ಮಾಡದೆ ಹತ್ತಿರದ ಆಸ್ಪತ್ರೆಯ ವೈದ್ಯರಲ್ಲಿಗೆ ಹೋಗಿ ಆರೋಗ್ಯ ಪರೀಕ್ಷೆ ಮತ್ತು ರಕ್ತ ಪರೀಕ್ಷೆ ಮಾಡಿಸಿಕೊಳ್ಳ ಬೇಕಾಗುತ್ತದೆ ಎಂದು ಸಲಹೆಯಿತ್ತರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿ ಯರಾದ ನಮಿತ, ಸ್ವಾತಿ, ಇಂದಿರಾ, ಪವಿತ್ರ, ಲ್ಯಾಬ್ ಟೆಕ್ನಿಷಿಯನ್ ಕುಮಾರ್, ಸಿಬ್ಬಂದಿಗಳಾದ ರುದ್ರೇಶ್, ಗಿರೀಶ್, ಕೃಷ್ಣಪ್ಪ, ಶೋಭ ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಮಲೇರಿಯಾ ಕಾಯಿಲೆ ಹರಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು.