ಮಡಿಕೇರಿ, ಏ. 27 : ಗ್ರಾಮೀಣ ಪ್ರದೇಶದ ಯುವಜನರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಆಡಳಿತಾತ್ಮಕ ವ್ಯವಸ್ಥೆಗೆ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೂಲದ ಕೃಷಿಕ್ ಸರ್ವೋದಯ ಫೌಂಡೇಷನ್ ಹಾಗೂ ಮಡಿಕೇರಿಯ ಟ್ರೈಕಲರ್ ಅಕಾಡೆಮಿ ಸಹಯೋಗದಲ್ಲಿ ಸ್ಪರ್ಧಾ ಜಾಗೃತಿ ಅಭಿಯಾನವನ್ನು ಆರಂಭಿಸಿದೆ ಎಂದು ಕೃಷಿಕ ಸರ್ವೋದಯ ಫೌಂಡೇಷನ್‍ನ ಜಿಲ್ಲಾಧ್ಯಕ್ಷ

ಡಾ. ಯಾಲದಾಳು ಮನೋಜ್ ಬೋಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿವೃತ್ತ ಐಎಎಸ್, ಕೆ.ಎ.ಎಸ್ ಮತ್ತು ಇತರ ಇಲಾಖೆಗಳ ಸೇವಾ ಮನೋಭಾವದ ಅಧಿಕಾರಿಗಳಿಂದ ಸ್ಥಾಪಿಸಲ್ಪಟ್ಟ ಕೃಷಿಕ್ ಸರ್ವೋದಯ ಫೌಂಡೇಷನ್ ಕಳೆದ 27 ವರ್ಷಗಳಿಂದ ಗ್ರಾಮೀಣ ಪ್ರದೇಶದ ಯುವಜನರಿಗೆ ತರಬೇತಿ ಹಾಗೂ ಮಾರ್ಗದರ್ಶನ ಮಾಡುವ ಮೂಲಕ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳು, ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್ ಮತ್ತು ಆರೋಗ್ಯ ಇಲಾಖೆಗಳಲ್ಲಿ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವಾಗಿದೆ ಎಂದು ಹೇಳಿದರು.

ಇದೀಗ ಮಡಿಕೇರಿಯ ಟ್ರೈಕಲರ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲೆಯ ಮತ್ತು ಹೊರಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾ ಜಾಗೃತಿ ಕೇಂದ್ರವನ್ನು ಮಡಿಕೇರಿಯಲ್ಲಿ ತೆರೆದಿದೆ.

ಅವಕಾಶ ವಂಚಿತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವಿದ್ಯಾರ್ಥಿಗಳಿಗೆ, ಹಳ್ಳಿಗಳ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಬೆಂಗಳೂರು, ಮೈಸೂರು ಮತ್ತಿತರ ದೂರದ ಊರುಗಳಲ್ಲಿ ತರಬೇತಿ ಪಡೆಯಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೆ ಸರಕಾರ ಕ್ಷೇತ್ರದಲ್ಲಿನ ಉದ್ಯೋಗಾಗವಕಾಶಗಳ ಬಗ್ಗೆ ಮಾಹಿತಿ ಜಾಗೃತಿ, ತರಬೇತಿ ನೀಡುವದರೊಂದಿಗೆ ಅವರನ್ನು ಸರಕಾರಿ ಸೇವೆಗಳಿಗೆ ಸೇರುವಂತೆ ಉತ್ತೇಜಿಸುವದು ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ವ್ಯವಸ್ಥೆ ಮಾಡಲಾಗುವದಲ್ಲದೆ, ಹೆಚ್ಚಿನ ತರಬೇತಿಯ ಅಗತ್ಯವಿರುವವರಿಗೆ ಮೈಸೂರು-ಬೆಂಗಳೂರಿನಲ್ಲಿ ಹಾಸ್ಟೆಲ್ ಸೌಲಭ್ಯದೊಂದಿಗೆ ತರಬೇತಿ ನೀಡಲಾಗುವದು ಎಂದು ತಿಳಿಸಿದರು.

ಪಿಯುಸಿ ಮತ್ತು ಪದವಿ ಪೂರ್ವಗೊಳಿಸಿದ ವಿದ್ಯಾರ್ಥಿಗಳಲ್ಲಿ ಕಲಿಯುವಿಕೆಯ ಹಂಬಲವಿದ್ದಲ್ಲಿ, ಸರಕಾರಿ ಸೇವೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಲ್ಲಿ ಅಂತಹವರು ಸ್ಪರ್ಧಾ ಜಾಗೃತಿ ಅಭಿಯಾನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದೆಂದ ಅವರು, ಯುಪಿಎಸ್‍ಸಿ,ಕೆಪಿಎಸ್‍ಸಿ, ಬ್ಯಾಂಕಿಂಗ್, ರೈಲ್ವೇಸ್, ಎಸ್‍ಎಸ್‍ಸಿ, ಎನ್‍ಇಟಿ, ಎಂಎಟಿ ಪಿಜಿಸಿಇಟಿ, ಸಿಎಟಿ, ಎನ್‍ಡಿಎ, ಐಇಎಲ್‍ಟಿಎಸ್, ಸ್ಪೋಕನ್ ಇಂಗ್ಲೀಷ್ ಮತ್ತಿತರ ಕಮ್ಯುನಿಕೇಷನ್ ಸ್ಕಿಲ್ಸ್ ಕೋರ್ಸ್‍ಗಳು, ನವೋದಯ ಮತ್ತು ಸೈನಿಕ ಸ್ಕೂಲ್ ಪ್ರವೇಶ ಪರೀಕ್ಷಾ ತರಬೇತಿ ಪಡೆಯಬಹುದು ಎಂದು ಹೇಳಿದರು.

ಕೊಡಗಿನ ಮತ್ತು ಹೊರ ಜಿಲ್ಲೆಗಳ ನುರಿತ ತರಬೇತುದಾರರ ಈ ಸ್ಪರ್ಧಾ ಜಾಗೃತಿ ಅಭಿಯಾನದಲ್ಲಿ ತರಬೇತಿ ನೀಡಲಿದ್ದು, ಪದವಿ ಮತ್ತು ಪದವಿಪೂರ್ವ ಕಾಲೇಜುಗಳನ್ನು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಪ್ರತೀ ಕಾಲೇಜುಗಳಲ್ಲಿ ಎರಡು ಗಂಟೆಗಳ ವಿಚಾರಗೋಷ್ಠಿ ಆಯೋಜಿಸ ಲಾಗುವದು ಎಂದ ಅವರು, ಆಯಾ ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಮಡಿಕೇರಿಯ ಸ್ಪರ್ಧಾ ಜಾಗೃತಿ ಕೇಂದ್ರವನ್ನು (ಮೊಬೈಲ್-9448005642) ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೃಷಿಕ್ ಸರ್ವೋದಯ ಫೌಂಡೇಷನ್ ಜಿಲ್ಲಾ ಉಪಾಧ್ಯಕ್ಷ ಅಂಬೆಕಲ್ ನವೀನ್‍ಕುಶಾಲಪ್ಪ, ನಿರ್ದೇಶಕ ವೈ.ಡಿ.ಕೇಶವಾನಂದ, ಖಜಾಂಚಿ ಪೊಕ್ಕುಳಂಡ್ರ ಸಂದೀಪ್, ಟ್ರೈಕಲರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿ ಮೋಕ್ಷಿತ್ ಪಟೇಲ್ ಹಾಗೂ ಗೌರವ್ ಪಟೇಲ್ ಉಪಸ್ಥಿತರಿದ್ದರು.