ಕೂಡಿಗೆ, ಏ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಪ್ರಾಥಮಿಕ ಶಾಲೆಯ ಹಿಂಭಾಗದ ಎತ್ತರವಾದ ಸ್ಥಳದಲ್ಲಿ ಗ್ರಾಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಬೋರ್‍ವೆಲ್‍ನಿಂದ ನೀರು ಟ್ಯಾಂಕ್‍ಗೆ ತುಂಬಿ, ಆ ಟ್ಯಾಂಕ್‍ನ ಮೂಲಕ ಗ್ರಾಮದ ಬೀದಿಗಳಿಗೆ ನೀರನ್ನು ಹರಿಸುವ ಉದ್ದೇಶದಿಂದ ಕಿರು ನೀರಿನ ಟ್ಯಾಂಕ್ ಅನ್ನು ನಿರ್ಮಿಸಿ ಆರು ವರ್ಷಗಳೇ ಕಳೆದಿದ್ದರೂ, ಈವರೆಗೂ ಆ ಕುಡಿಯುವ ನೀರಿನ ಟ್ಯಾಂಕ್‍ನಿಂದ ಒಂದು ಹನಿ ನೀರು ಕೂಡಾ ಗ್ರಾಮದವರಿಗೆ ಉಪಯೋಗಕ್ಕೆ ದಕ್ಕಿಲ್ಲ.

ಆರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕುಡಿಯು ನೀರಿನ ಟ್ಯಾಂಕ್ ಅನ್ನು ಅಂದಾಜು ರೂ. 6 ಲಕ್ಷ ನಿರ್ಮಿಸಿ, ಬೋರ್‍ವೆಲ್‍ನಿಂದ ನೀರು ತುಂಬಲು ಪೈಪ್‍ಗಳನ್ನು ಅಳವಡಿಸ ಲಾಗಿದೆ. ಹಾಗೂ ಟ್ಯಾಂಕ್‍ನಿಂದ ನೀರು ಹೊರಹೋಗಲು ಬೇಕಾಗುವ ಯಂತ್ರೋಪಕರಣಗಳನ್ನು ಸಹ ಅಳವಡಿಸಲಾಗಿದೆ. ಇಷ್ಟಾದರೂ ನೀರು ಯಾವದೇ ರೀತಿಯಲ್ಲಿಯು ಬಳಕೆಗೆ ದೊರಕದೆ, ಟ್ಯಾಂಕ್ ಸುತ್ತಲು ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮದಲಾಪುರ ಮತ್ತು ಸುತ್ತಮುತ್ತಲ ಗ್ರಾಮದ ಜನರಿಗೆ ನೀರಿನ ಸಮಸ್ಯೆಯಾಗದಂತೆ ಗ್ರಾ.ಪಂ. ವತಿಯಿಂದ ಬೋರ್‍ವೆಲ್ ಕೊರೆಸಿ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಕುಡಿಯುವ ನೀರಿಗಾಗಿ ನಿರ್ಮಿಸಿದ ಈ ನೀರಿನ ಟ್ಯಾಂಕ್‍ನಿಂದ ಯಾವದೇ ರೀತಿಯ ಪ್ರಯೋಜನವು ಆಗಿಲ್ಲ. ಈ ಟ್ಯಾಂಕ್ ನಿರ್ಮಿಸಿರುವ ಉದ್ದೇಶವೇನೆಂಬದೇ ಗ್ರಾಮಸ್ಥರ ಪ್ರಶ್ನೆಯಾಗಿದೆ. ಲಕ್ಷಗಟ್ಟಲೆ ಹಣ ವ್ಯಯ ಮಾಡಿ ಈ ಟ್ಯಾಂಕ್ ನಿರ್ಮಿಸಿ ಉಪಯೋಗಕ್ಕೂ ಬಾರದೆ ಪಾಳುಬಿದ್ದಿದ್ದು, ಇದರತ್ತ ಯಾರೂ ಕೂಡ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ.