ಸಿದ್ದಾಪುರ, ಏ. 27. ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ನೋರ್ವನು ಗಾಯಗೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲದಲ್ಲಿ ನಡೆದಿದೆ.

ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಎಸ್ಟೇಟ್‍ನ ಫಿಂಟೊ ಎಂಬವರ ಲೈನ್ ಮನೆಯಲ್ಲಿ ವಾಸಮಾಡಿಕೊಂಡಿರುವ ಕಾರ್ಮಿಕ ಜಯರಾಂ ಪೂಜಾರಿ (43) ಎಂಬವರು ಶುಕ್ರವಾರ ಸಂಜೆ ಅಂಗಡಿಯಿಂದ ಸಾಮಗ್ರಿಗಳನ್ನು ಖರೀದಿಸಿ ಕೊಂಡು ಮನೆಯತ್ತ ಬರುತ್ತಿರುವ ಸಂದರ್ಭ ಅತ್ತಿಮಂಗಲ ತೋಟದೊಳಗಿದ್ದ ಒಂಟಿಸಲಗವೊಂದು ಏಕಾಏಕಿ ಜಯರಾಂ ಮೇಲೆ ಧಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಈ ಸಂದರ್ಭ ಜಯರಾಂ ಕಿರುಚಿಕೊಂಡಾಗ ಸಮೀಪದಲ್ಲಿದ್ದ ಕಾರ್ಮಿಕರು ಧಾವಿಸಿ ಬರುವಷ್ಟರಲ್ಲಿ ಕಾಡಾನೆ ಅಲ್ಲಿಂದ ತೆರಳಿತ್ತು ಎನ್ನಲಾಗಿದೆ.

ಕಾಡಾನೆ ಧಾಳಿಗೆ ಸಿಲುಕಿದ ಜಯರಾಂ ಕಣ್ಣಿನ ಭಾಗಕ್ಕೆ, ಮುಖಕ್ಕೆ ಹಾಗೂ ಎದೆಯ ಭಾಗಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಜಯರಾಂಗೆ ಸಿದ್ದಾಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಕುಶಾಲನಗರ ವಲಯ ಉಪವಲಯ ಅರಣ್ಯಾಧಿಕಾರಿ ವಿಲಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅರಣ್ಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡದವರು ತೋಟದೊಳಗೆ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿಸಿದರು.ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾರ್ಮಿಕರು ಹಾಗೂ ಗ್ರಾಮಸ್ಥರು ಭಯಬೀತರಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. - ವಾಸು.