ಮಡಿಕೇರಿ, ಏ. 27: ಇಲ್ಲಿನ ಐತಿಹಾಸಿಕ ಶ್ರೀ ಆಂಜನೇಯ ಗುಡಿಯ 3ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ದೈವಿಕ ವಿಧಿ - ವಿಧಾನಗಳೊಂದಿಗೆ ನೆರವೇರಿತು. ಸನ್ನಿಧಿಯಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಶ್ರೀ ಆಂಜನೇಯನಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.

ಅಲ್ಲದೆ ಋತ್ವಿಜರಿಂದ ಗಣಪತಿ ಹೋಮ, ಕಲಶ ಸ್ಥಾಪನೆಯೊಂದಿಗೆ ಪೂಜೆ ಬಳಿಕ ದೇವರಿಗೆ ಅಭಿಷೇಕ ನೆರವೇರಿಸಲಾಯಿತು. ನೀಲೇಶ್ವರ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಶೇಷ ಸೇವೆಗಳೊಂದಿಗೆ ಮಹಾಪೂಜೆ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನೆರವೇರಿತು. ಅರ್ಚಕ ಸಂತೋಷ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಈ ವೇಳೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಪ್ರಮುಖರಾದ ಸುನಿಲ್ ಕುಮಾರ್, ಎಸ್.ಎಸ್. ಸಂಪತ್ ಕುಮಾರ್, ರಮೇಶ್ ಹೊಳ್ಳ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಪುತ್ತೂರು ಮಹಿಳೆಯರಿಂದ ಯಕ್ಷಗಾನ, ತಾಳಮದ್ದಳೆ ಏರ್ಪಡಿಸಲಾಗಿತ್ತು.