ಸೋಮವಾರಪೇಟೆ, ಏ. 28: ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸ್ಫೋಟ ಮಾನವೀಯತೆಗೆ ಕಂಟಕವಾಗಿದೆ. ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರೂ ಸಹ ಸಹಕರಿಸಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹೇಳಿದರು.
ವೃತ್ತನಿರೀಕ್ಷಕರ ಕಚೇರಿಯಲ್ಲಿ ನಡೆದ ಉದ್ಯಮಿಗಳು, ಧಾರ್ಮಿಕ ಮುಖಂಡರು, ದೇವಾಲಯ, ಮಸೀದಿ, ಚರ್ಚ್ಗಳ ಅಧ್ಯಕ್ಷರು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಶ್ರೀಲಂಕಾ ಮಾದರಿಯ ಧಾಳಿಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಹಿನ್ನೆಲೆ ಇಂತಹ ಯಾವದೇ ಕುಕೃತ್ಯಗಳು ನಡೆಯದಂತೆ ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ನಗರದಲ್ಲಿ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಗುಣಮಟ್ಟದ ಸಿ.ಸಿ. ಕ್ಯಾಮೆರಾ, ನಂಬಿಕಸ್ಥ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು, ಹೊಟೇಲ್ ಮತ್ತು ಇನ್ನಿತರ ಪ್ರಮುಖ ಪ್ರದೇಶಗಳಲ್ಲಿ ಲೋಹ ಶೋಧಕ ಯಂತ್ರಗಳಿಂದ ಒಳ ಬರುವವರನ್ನು ತಪಾಸಣೆಗೊಳಪಡಿಸಬೇಕು ಎಂದ ಅವರು, ದುಷ್ಕೃತ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸನ್ನದ್ದವಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದರು. ಸಭೆಯಲ್ಲಿ ಉಪನಿರೀಕ್ಷಕ ಶಿವಶಂಕರ್, ಪ.ಪಂ. ಸದಸ್ಯೆ ಶೀಲಾ ಡಿಸೋಜಾ, ಸೋಮೇಶ್ವರ ದೇವಾಲಯದ ಕಾರ್ಯದರ್ಶಿ ವಿಜೇತ್, ಬಸವೇಶ್ವರ ದೇವಾಲಯದ ಗುರು ಪ್ರಸಾದ್, ಧನು, ಚೇತನ್, ಮಸೀದಿಯ ಹಸನಬ್ಬ, ಚರ್ಚ್ನ ಪದಾಧಿಕಾರಿಗಳು, ಹಿಂದೂ ಜಾಗರಣ ವೇದಿಕೆಯ ಗೋಪಾಲ್ ಇತರರು ಉಪಸ್ಥಿತರಿದ್ದರು.