ವೀರಾಜಪೇಟೆ, ಏ. 28 : ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ಸಂಸ್ಥೆ (ಎಸ್.ಎಚ್.ಡಿ.ಪಿ) ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದು ಮುಂದಿನ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ರಸ್ತೆ ಅಗಲೀಕರಣದ ಕಾಮಗಾರಿಗೆ ಚಾಲನೆ ದೊರೆಯಲಿದೆ. ರಾಜ್ಯ ಹೆದ್ದಾರಿ ಯೋಜನಾ ಸಂಸ್ಥೆ ತಯಾರಿಸಿರುವ ಕ್ರಿಯಾ ಯೋಜನೆಯಲ್ಲಿ ಸಿದ್ದಾಪುರದ ನೆಲ್ಲಿಹುದಿಕೇರಿಯ ಸೇತುವೆಯಿಂದ ರಸ್ತೆ ಅಗಲೀಕರಣ ಪ್ರಾರಂಭವಾಗಲಿದ್ದು ರೂ ಹದಿಮೂರೂವರೆ ಕೋಟಿ ವೆಚ್ಚದಲ್ಲಿ ಸುಮಾರು ಹದಿನೇಳು ಕಿ.ಮೀ. ರಸ್ತೆ ಅಭಿವೃದ್ಧಿಯ ಅಗಲೀಕರಣ ನಡೆಯಲಿದೆ. ಯೋಜನೆಯ ಪ್ರಕಾರ ರಸ್ತೆಯ ಮಧ್ಯ ಭಾಗದಿಂದ ಸರಾಸರಿ ಎರಡು ಕಡೆಗಳಲ್ಲಿ ತಲಾ ಏಳು ಮೀ.ಗಳಷ್ಟು ಅಗಲೀಕರಣ ನಡೆಯಲಿದ್ದು ಇದರಲ್ಲಿ ರಸ್ತೆಯ ಬೌಲ್ಡರಿಂಗ್, ಫುಟ್ಪಾತ್, ಚರಂಡಿ ಸೇರಲಿದೆ.

ರಸ್ತೆ ಅಗಲೀಕರಣದ ಕಾಮಗಾರಿಯನ್ನು ಎಸ್.ಎಚ್.ಡಿ.ಪಿ.ಸಂಸ್ಥೆ ನಿರ್ವಹಿಸಲಿದ್ದು ಲೋಕೋಪಯೋಗಿ ಇಲಾಖೆ ಉಸ್ತುವಾರಿ ಕೆಲಸ ಮಾಡಲಿದೆ. ಮೂರು ತಿಂಗಳ ಹಿಂದೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಕಿಕೊಂಡಿದ್ದ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯ ಚರಂಡಿ ಅಂಚಿನಿಂದ ಕಟ್ಟಡ ತೆರವು ಮಾಡುವ ಕಾರ್ಯಕ್ಕೆ ಈಗಿನ ರಸ್ತೆ ಅಗಲೀಕರಣದಿಂದ ತೆರೆ ಬೀಳಲಿದೆ.

ಇದೀಗ ಎಸ್.ಎಚ್.ಡಿ.ಪಿ. ಸಂಸ್ಥೆಯು ಕೈಗೊಂಡಿರುವ ಈ ಯೋಜನೆಗೆ ರಾಜ್ಯ ಸರಕಾರ ಅಂಗೀಕಾರ ನೀಡಿದ್ದು ರೂ ಹದಿಮೂರುವರೆ ಕೋಟಿ ಅನುದಾನ ಬಿಡುಗಡೆ ಮಾಡಿದ್ದರಿಂದ ಹದಿನೈದು ದಿನಗಳ ಹಿಂದೆ ಸಂಸ್ಥೆ ರಸ್ತೆ ಅಗಲೀಕರಣಕ್ಕಾಗಿ ಆನ್ ಲೈನ್‍ನಲ್ಲಿ ಇ ಟೆಂಡರ್ ಆಹ್ವಾನಿಸಿದ್ದು; ಇ ಟೆಂಡರ್‍ನಲ್ಲಿ ಮೈಸೂರು, ಮಂಗಳೂರು, ಹಾಸನ, ಮಂಡ್ಯ, ಚನ್ನರಾಯಪಟ್ಟಣ, ಸಕಲೇಶಪುರ ವಿವಿಧೆಡೆಗಳ ಕಂಟ್ರಾಕ್ಟರ್‍ಗಳು ಭಾಗವಹಿಸಿದ್ದು ಇನ್ನು ಟೆಂಡರ್‍ನ್ನು ಅಂತಿಮಗೊಳಿಸಿಲ್ಲವೆನ್ನಲಾಗಿದೆ.

ಇದೇ ಯೋಜನೆಯಲ್ಲಿ ವೀರಾಜಪೇಟೆಯ ಸುಂಕದ ಕಟ್ಟೆಯ ರಾಜ್ಯ ಹೆದ್ದಾರಿ ಮುಖ್ಯರಸ್ತೆಯ ಸಿದ್ದಾಪುರ ರಸ್ತೆ, ತೆಲುಗರಬೀದಿ, ಜೈನರಬೀದಿ, ಎಫ್.ಎಂ.ಸಿ ರಸ್ತೆ ಮುಖ್ಯ ರಸ್ತೆ ಮೀನುಪೇಟೆಯ ತನಕ ರಸ್ತೆ ಅಗಲೀಕರಣ ನಡೆಯಲಿದೆ. ಸಂಸ್ಥೆಯು ರಸ್ತೆ ಮಧ್ಯ ಭಾಗದಿಂದ ಎಷ್ಟು ಅಡಿಗಳಷ್ಟು ಅಂತರದಲ್ಲಿ ರಸ್ತೆ ಅಗಲೀಕರಿಸಬೇಕೆಂದುಅಧಿಕಾರಿಗಳು ಕ್ಷೇತ್ರದ ಶಾಸಕರು, ಸಂಸದರೊಂದಿಗೆ ವಿಚಾರ ವಿನಿಮಯ ಮಾಡಲಿರುವದಾಗಿ ಗೊತ್ತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿಯಿಂದ 500 ಮೀಟರ್ ಅಂತರದಲ್ಲಿ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದಿಂದ ತತ್ತರಿಸಿದ್ದ ರಾಜ್ಯ ಸರಕಾರ ಆಯ್ದ ಮದ್ಯದ ಅಂಗಡಿಗಳ ಬಂದ್‍ನಿಂದ ವಾರ್ಷಿಕ ನಷ್ಟವಾಗುವದನ್ನು ತಡೆಯಲು ನಗರ ಪ್ರದೇಶ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಪ್ರಮುಖ ಹೆದ್ದಾರಿಯನ್ನು ಡಿನೋಟಿಫೈ ಮಾಡಿ ಈ ರಸ್ತೆ ನಿರ್ವಹಣೆಗೆ ಪುರಸಭೆ, ಪಟ್ಟಣ ಪಂಚಾಯಿತಿಗೆ ವಹಿಸಿತ್ತು. ಈ ಡಿನೋಟಿಫೈ ಆದೇಶದಲ್ಲಿ ವೀರಾಜಪೇಟೆಯ ಮಗ್ಗುಲದ ತಿರುವಿನಿಂದ ಆರ್ಜಿ ಗ್ರಾಮದ ಸೇತುವೆ ವರೆಗಿನ ಸುಮಾರು ಎರಡೂವರೆ ಕಿ.ಮೀ.ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಬರುವ ಸುಮಾರು 9 ಮದ್ಯದ ಅಂಗಡಿಗಳಿಗೆ ಮರು ಜೀವ ದೊರೆತು ಈಗಲೂ ಚಾಲನೆಯಲ್ಲಿವೆ. ಹೀಗಾಗಿ ಸುಪ್ರೀಂಕೋರ್ಟ್ ಮದ್ಯದ ಅಂಗಡಿಗಳ ಚಾಲನೆಗೆ ಹಸಿರು ನಿಶಾನೆ ತೋರಿಸಿತ್ತು.

1977ರ ಆಗಿನ ಲೋಕೋಪಯೋಗಿ ಸಚಿವರಾಗಿದ್ದ ಚನ್ನಬಸಪ್ಪ ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿ ರಸ್ತೆ ಬದಿಯ ಎಲ್ಲ ಕಟ್ಟಡಗಳನ್ನು ಕೆಡವಿ ರಸ್ತೆಗಳನ್ನು ವಿಶಾಲಗೊಳಿಸಿದ್ದರು. ಆಗ ರಸ್ತೆ ಅಗಲೀಕರಣಕ್ಕೆ ಇಲಾಖೆಗೆ ಸೇರಿದ ಜಾಗವನ್ನು ವಶ ಪಡಿಸಿಕೊಳ್ಳಲಾಗಿತ್ತು. ಈಗ ಸರಕಾರ ರಸ್ತೆ ಅಗಲೀಕರಣಕ್ಕಾಗಿ ಜಾಗ ತೆರವು ಮಾಡಿದರೆ ಇಂದಿನ ಮಾರುಕಟ್ಟೆ ಬೆಲೆಯ ಪರಿಹಾರ ನೀಡಬೇಕಾಗಬಹುದು.

ಈಗಾಗಲೇ ಕೇಂದ್ರ ಸರಕಾರದ ರೂ 5ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಅಭಿವೃದ್ಧಿ ಯೋಜನೆಯಲ್ಲಿ ಎಲ್ಲ ಮುಖ್ಯ ರಸ್ತೆಗಳಲ್ಲಿ ಸುಮಾರು 200 ರಿಂದ 250 ವಿದ್ಯುತ್ ಕಂಬಗಳ ಅಳವಡಿಕೆ, ಆಯ್ದ ಸ್ಥಳಗಳಲ್ಲಿ ಹೊಸ ಟ್ರಾನ್ಸ್‍ಫಾರ್ಮರ್‍ಗಳು, ಜೊತೆಗೆ ಹಳೆ ವಿದ್ಯುತ್ ತಂತಿಗಳ ಬದಲಾವಣೆ ಗೊಳಿಸಿದೆ. ಇದರ ವೆಚ್ಚವೆಲ್ಲ ರಸ್ತೆ ಅಗಲೀಕರಣದಿಂದ ಸರಕಾರಕ್ಕೆ ನಷ್ಟವಾಗಲಿದೆ.

- ಡಿ.ಎಂ.ಆರ್