ಸೋಮವಾರಪೇಟೆ, ಏ. 28: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಭಾರದ ಗುಂಡು ಎತ್ತುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ಸ್ಪರ್ಧೆಯಲ್ಲಿ ಹಲವು ಯುವಕರು ಪಾಲ್ಗೊಂಡು ಕಲ್ಲನ್ನು ಎತ್ತುವ ಪ್ರಯತ್ನ ಮಾಡಿ ಯಶಸ್ವಿಯಾದರು. ದೊಡ್ಡತೋಳೂರು ಗ್ರಾಮದ ಸೋಮಯ್ಯ ಅತೀ ಭಾರದ ಕಲ್ಲನ್ನು ಎತ್ತುವ ಮೂಲಕ ಪ್ರಥಮ ಬಹುಮಾನ ಪಡೆದು ಸುಗ್ಗಿ ಶೂರರಾಗಿ ಆಯ್ಕೆಯಾದರು.

ದ್ವಿತೀಯ ಬಹುಮಾನವನ್ನು ಅದೇ ಗ್ರಾಮದ ಹೆಚ್.ಜೆ. ಯೋಗೇಶ್, ತೃತೀಯ ಬಹುಮಾನವನ್ನು ಇಂದ್ರೇಶ್ ಹಾಗೂ ಸಮಾಧಾನಕರ ಬಹುಮಾನ ವನ್ನು ಎ.ಎಸ್. ಸುರೇಶ್ ಪಡೆದರು. ಬಹುಮಾನಗಳನ್ನು ಶಿಕ್ಷಕರಾದ ಶಿವ ಕುಮಾರ್ ಅವರು ಪ್ರಾಯೋಜಿಸಿದ್ದು, ಭಾರದ ಗುಂಡು ಎತ್ತುವ ಸ್ಪರ್ಧಾಳುಗಳಿಗೆ ಹೆಚ್ಚಿನ ಪ್ರೋತ್ಸಾಹ ತುಂಬಿದರು. ತೋಳೂರುಶೆಟ್ಟಳ್ಳಿ ಗ್ರಾಮಾಧ್ಯಕ್ಷ ಡಿ.ಎನ್. ರಾಜ್ ಗೋಪಾಲ್, ಕಾರ್ಯದರ್ಶಿ ಡಿ.ಎಲ್. ಜಗದೀಶ್, ಖಜಾಂಚಿ ಮನೋಹರ್ ಅವರುಗಳು ಬಹುಮಾನ ವಿತರಿಸಿದರು.