ಶ್ರೀಮಂಗಲ, ಏ. 30: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ)ಯಲ್ಲಿ ಅಕ್ರಮವಾಗಿ ಪತ್ತೆಯಾಗಿದ್ದ ವಿಯೆಟ್ನಾಂ ಕಾಳುಮೆಣಸು ಪುಡಿಯ ಮಾದರಿಯು ಕಳಪೆ ಗುಣಮಟ್ಟದೆಂದು ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದ್ದು, ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತಾಧಿಕಾರಿಗಳು ಕಡತವನ್ನು ವಿಲೇವಾರಿ ಮಾಡದೇ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬೆಳೆಗಾರ ಒಕ್ಕೂಟ ಆರೋಪಿಸಿದೆ.ವಿಯೆಟ್ನಾಂ ಕಾಳುಮೆಣಸು ಆಮದು ದೊಡ್ಡ ಹಗರಣವಾಗಿದ್ದು, ಇದರಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಅಕ್ರಮ ಕಾಳುಮೆಣಸು ಆಮದು ತಡೆಗಟ್ಟಲು ಹಾಗೂ ಕಳಪೆ ಕಾಳುಮೆಣಸು ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಲು ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.(ಮೊದಲ ಪುಟದಿಂದ) ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಿಯೆಟ್ನಾಂ ಕಾಳುಮೆಣಸು ಆಮದು ಮಾಡಿಕೊಂಡು ಅದನ್ನು ಕೊಡಗಿನ ಉತ್ತಮ ಕಾಳುಮೆಣಸಿನೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದ ಆರೋಪದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆ ಪೊಲೀಸರು ಗೋದಾಮು ಪರಿಶೀಲನೆ ವೇಳೆ 1044 ಚೀಲ ಕಾಳುಮೆಣಸು ಪುಡಿಯನ್ನು ಹೋಲುವ ಪುಡಿ ದೊರೆತು ಅದನ್ನು ವಶಕ್ಕೆ ಪಡೆದಿದ್ದರು. ಈ ಪುಡಿಯ ಮಾದರಿಯನ್ನು ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದೆ 51 ರಡಿ ಪರೀಕ್ಷೆಗೆ ಕಳುಹಿಸಲಾಯಿತು. ಈ ಬಗ್ಗೆ ಪ್ರಯೋಗಾಲಯದ ವರದಿಯಲ್ಲಿ ಈ ಕಾಳುಮೆಣಸು ಸಂಪೂರ್ಣ ಕಳಪೆಯಾಗಿದೆ ಎಂಬದು ಸಾಬೀತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಂಕಿತಾಧಿಕಾರಿಗಳು ಈ ಕಡತವನ್ನು ಮುಂದಿನ ಕಾನೂನು ಕ್ರಮಕ್ಕೆ ವಿಲೇವಾರಿ ಮಾಡದೆ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಭೆಯಲ್ಲಿ ಪದಾಧಿಕಾರಿಗಳು ಕಿಡಿಕಾರಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 6-7 ತಿಂಗಳಿನಿಂದ ಮಳೆ ಇಲ್ಲದೆ ಇದೀಗ 15 ದಿನಗಳಿಂದ ಕೆಲವೆಡೆ ಮಳೆಯಾಗಿದ್ದು, ಮಳೆ ಸಕಾಲಕ್ಕೆ ಬಾರದ ಹಿನ್ನೆಲೆ ಮುಂದಿನ ಕಾಫಿ, ಕಾಳುಮೆಣಸು ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ತೀವ್ರ ಬಿಸಿಲಿನಿಂದ ನದಿ, ತೋಡು, ಕೆರೆ ಕಟ್ಟೆಗಳು ಬತ್ತಿ ಬರಡಾಗಿದ್ದು ಕುಡಿಯುವ ನೀರಿನ ಸಮಸ್ಯೆ ಸಹ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೊಡಗು ಬರಪೀಡಿತ ಪ್ರದೇಶವೆಂದು ಘೋಷಿಸಲು ಮನವಿ ಮಾಡಲಾಗಿದೆ ಎಂದು ಹರೀಶ್ ಅಪ್ಪಯ್ಯ ತಿಳಿಸಿದರು.

2018 ರ ಮುಂಗಾರು ಮಳೆಯಿಂದ ಜಿಲ್ಲೆಯ ಬಹಳಷ್ಟು ಬೆಳೆಗಾರರು ನಷ್ಟ ಅನುಭವಿಸಿದ್ದು, ಈ ಬಗ್ಗೆ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಗಳಿಗೆ ಜಿಲ್ಲಾಡಳಿತ ಇನ್ನು ಪರಿಹಾರ ವಿತರಿಸಿಲ್ಲ. ಕಳೆದ ಮಳೆಗಾಲದಿಂದ ಬೆಳೆ ನಷ್ಟಗೊಂಡ ಬೆಳೆಗಾರರಿಗೆ ಇನ್ನೊಂದು ಮಳೆಗಾಲ ಸಮೀಪಿಸುತ್ತಿದ್ದರೂ ಪರಿಹಾರ ವಿತರಣೆಯಾಗಿಲ್ಲ. ಕೂಡಲೇ ಜಿಲ್ಲಾಡಳಿತ ಬೆಳೆಗಾರರ ಖಾತೆಗಳಿಗೆ ಪರಿಹಾರ ಹಣ ಪಾವತಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಒಕ್ಕೂಟದಿಂದ ಮನವಿ ಮಾಡಲು ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ ಸಲಹೆ ನೀಡಿದರು. ಜಿಲ್ಲೆಯ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಬೆಳೆಗಾರರ ಸಭೆಗೆ ಆಗಮಿಸಿ ಮನವರಿಕೆ ಮಾಡಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಅವರು ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಅಣ್ಣೀರ ಹರೀಶ್ ಮಾದಪ್ಪ, ಬಾಚಂಗಡ ದೇವಯ್ಯ, ಮಾಣೀರ ವಿಜಯ್ ನಂಜಪ್ಪ, ಚೆಪ್ಪುಡೀರ ಶರಿ ಸುಬ್ಬಯ್ಯ, ಜಮ್ಮಡ ಮೋಹನ್ ಮಾದಪ್ಪ ಮತ್ತಿತರರು ಮಾತನಾಡಿದರು.