ಕುಶಾಲನಗರ, ಏ. 30: ಶಾಲಾ ಆವರಣದಲ್ಲಿ ತೇಗದ ಮರ ಕಡಿದು ಶಾಲೆಯ ಅಡುಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಪ್ರಕರಣವೊಂದು ಕೊಪ್ಪದ ಶಾಲೆಯೊಂದರಲ್ಲಿ ಪತ್ತೆಯಾಗಿದೆ. ಕೊಪ್ಪ ಗಿರಗೂರು ಗ್ರಾಮದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಪ್ರಕರಣ ನಡೆದಿದ್ದು ಸರಕಾರಿ ಸ್ಥಳದಲ್ಲಿದ್ದ 5 ತೇಗದ ಮರಗಳನ್ನು ಕಡಿದು ಅಡುಗೆ ಕೋಣೆಯ ದಾಸ್ತಾನು ಕೊಠಡಿಯಲ್ಲಿ ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿರಿಯಾಪಟ್ಟಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬೈಲುಕೊಪ್ಪ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಶಾಲೆಗೆ ರಜೆ ಇದ್ದು ಈ ಸಂದರ್ಭ ಈ ಪ್ರಕರಣ ನಡೆದಿದೆ. ಕೊಠಡಿಗೆ ಬೀಗ ಜಡಿದ ದೃಶ್ಯ ಗೋಚರಿಸಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಶಾಲೆಯ ಮುಖ್ಯಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.