ಬೆಂಗಳೂರು, ಏ. 30: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪ್ರಸಕ್ತ ವರ್ಷದ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕಳೆದ ಬಾರಿ 18ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ 22ನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದೆ. ಕಳೆದ ಬಾರಿ 80.68 ಶೇಕಡ ಗಳಿಸಿದ್ದ ಕೊಡಗು ಜಿಲ್ಲೆ ಈ ಬಾರಿ 78.81 ಫಲಿತಾಂಶ ಪಡೆದುಕೊಂಡಿದೆ.ಪರೀಕ್ಷೆಗೆ ಹಾಜರಾದ ಒಟ್ಟು 6,444 ವಿದ್ಯಾರ್ಥಿಗಳಲ್ಲಿ 5,087 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 3,079 ವಿದ್ಯಾರ್ಥಿಗಳಲ್ಲಿ 2,383 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಪರೀಕ್ಷೆಗೆ ಹಾಜರಾಗಿದ್ದ 3,365 ವಿದ್ಯಾರ್ಥಿನಿಯರಲ್ಲಿ 2705 ವಿದ್ಯಾರ್ಥಿನಿಯರು ಉತ್ತೀರ್ಣ ರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾಹಿತಿ ನೀಡಿದ್ದಾರೆ. ಸರ್ಕಾರಿ ಶಾಲೆಗಳಾದ ಕೊಂಡಂಗೇರಿ, ಚೆಂಬು, ಹಂಡ್ಲಿ, ನಿಡ್ತ, ಮಕ್ಕಂದೂರು, ಟಿ.ಶೆಟ್ಟಿಗೇರಿ, ಕಿರಗಂದೂರು ಒಟ್ಟು 7 ಶಾಲೆಗಳು. ಅನುದಾನಿತ ಶಾಲೆಗಳಾದ ಬಿರುನಾಣಿ ಮರೆನಾಡು ಪ್ರೌಢ ಶಾಲೆ, ಬೆಕ್ಕೆ ಸೊಡ್ಲೂರು ಶಾರದ ಪ್ರೌಢ ಶಾಲೆ, ದೇವಣಗೆರೆ ಬಿ.ಸಿ.ಪ್ರೌಢ ಶಾಲೆ, ಅನುದಾನ ರಹಿತ ಶಾಲೆಗಳಾದ ಪೊನ್ನಂಪೇಟೆಯ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಕೊಡಗರಹಳ್ಳಿಯ (ಮೊದಲ ಪುಟದಿಂದ) ಶಾಂತಿ ನಿಕೇತನ ಪ್ರೌಢ ಶಾಲೆ, ಮೂರ್ನಾಡು ಮಾರುತಿ ಪ್ರೌಢ ಶಾಲೆ, ವೀರಾಜಪೇಟೆಯ ಕಾವೇರಿ ಪ್ರೌಢ ಶಾಲೆ, ಗೋಣಿಕೊಪ್ಪದ ಸಂತ ತೋಮಸ್ ಪ್ರೌಢ ಶಾಲೆ, ವೀರಾಜಪೇಟೆಯ ತ್ರಿವೇಣಿ ಪ್ರೌಢ ಶಾಲೆ, ಶ್ರೀಮಂಗಲದ ಜೆ.ಸಿ. ಆಂಗ್ಲ ಮಾಧ್ಯಮ ಶಾಲೆ, ಕೊಡಂಬೂರು ಜ್ಞಾನ ಜ್ಯೋತಿ ಪ್ರೌಢ ಶಾಲೆ, ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ ಹಾಗೂ ವೀರಾಜಪೇಟೆಯ ಮೌಂಟೇನ್ ವ್ಯೂ ಪ್ರೌಢ ಶಾಲೆ ಸೇರಿದಂತೆ ಒಟ್ಟು 20 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ವೀರಾಜಪೇಟೆ ತಾಲೂಕು ಶೇ.84.64, ಮಡಿಕೇರಿ ತಾಲೂಕು ಶೇ.73.85 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಶೇ.68.18 ಫಲಿತಾಂಶ ಬಂದಿದೆ.
ಸಾಧಕರಿವರು
ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯ ಒಟ್ಟು 8 ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನವನ್ನು ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು. ಶ್ರಾವಣಿ (616 ಅಂಕ) ಹಾಗೂ ಕಳತ್ಮಾಡು ಲಯನ್ಸ್ ಶಾಲೆಯ ಎಂ. ಜಾಗೃತಿ ಸುಬ್ಬಯ್ಯ (616) ಇವರುಗಳು ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಶನಿವಾರಸಂತೆ ಸೆಕ್ರೇಡ್ ಹಾರ್ಟ್ ಆಂಗ್ಲ ಮಾದ್ಯಮ ಶಾಲೆಯ ಈ.ಹೆಚ್. ಕವನ (615) ಪಡೆದಿದ್ದಾರೆ. ಇನ್ನುಳಿದಂತೆ ತೃತೀಯ ಸ್ಥಾನವನ್ನು ಐವರು ವಿದ್ಯಾರ್ಥಿಗಳು ಗಳಿಸಿಕೊಂಡಿದ್ದು, ಕುಶಾಲನಗರ ಫಾತಿಮಾ ಕಾನ್ವೆಂಟ್‍ನ ಎನ್.ಡಿ. ಹರ್ಷಿನಿ (612), ಡಿ.ಆರ್. ಶಿವಾನಿ (612), ಸೋಮವಾರಪೇಟೆ ಚೌಡ್ಲು ಸಾಂದೀಪನಿ ಶಾಲೆಯ ಹೆಚ್.ಕೆ. ಚಿನ್ಮಯಿ (612), ಶನಿವಾರಸಂತೆ ಸೇಕ್ರೆಡ್ ಹಾರ್ಟ್‍ನ ಬಿ. ಅಪೇಕ್ಷ (612) ಹಾಗೂ ಕಳತ್ಮಾಡು ಲಯನ್ಸ್ ಶಾಲೆಯ ಕೆ.ಎ. ಅನನ್ಯ (612) ಇವರುಗಳು ಪಡೆದುಕೊಂಡಿದ್ದಾರೆ.
ಸಾಧಕರ ಗುರಿ
ಜಿಲ್ಲೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ‘ಶಕ್ತಿ’ಯೊಂದಿಗೆ ಭವಿಷ್ಯದ ತಮ್ಮ ಗುರಿಯ ಬಗ್ಗೆ ಅಂತರಾಳ ಬಿಚ್ಚಿಟ್ಟಿದ್ದಾರೆ.
ವೈದ್ಯರಾಗುವೆವು
ಮುಂದೆ ವಿಜ್ಞಾನದಲ್ಲಿ ಶಿಕ್ಷಣ ಪಡೆದು ವೈದ್ಯರಾಗುವ ಗುರಿಹೊಂದಿರುವದಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರಾವಣಿ ಹಾಗೂ ಜಾಗೃತಿ ಸುಬ್ಬಯ್ಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಶ್ರಾವಣಿ ತೋಳೂರು ಶೆಟ್ಟಳ್ಳಿಯ ಕಾಫಿ ಬೆಳೆಗಾರ ಉದಯಕುಮಾರ್ ಹಾಗೂ ಲತಾ ದಂಪತಿಯ ಪುತ್ರಿ. ಜಾಗೃತಿ ಸುಬ್ಬಯ್ಯ ಮಡಿಕೇರಿ ಹಿಲ್ ರಸ್ತೆ ನಿವಾಸಿ, ಟಾಟಾ ಕಾಫಿ ಉದ್ಯೋಗಿ ಸ್ವದೀಪ್ ಸುಬ್ಬಯ್ಯ ಹಾಗೂ ರಶ್ಮಿ ದಂಪತಿಯ ಪುತ್ರಿಯಾಗಿದ್ದಾಳೆ.
ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಇ.ಹೆಚ್. ಕವನ ಕೂಡ ಎಂಬಿಬಿಎಸ್ ಮಾಡಿ ವೈದ್ಯಳಾಗುವ ಬಯಕೆ ಹೊಂದಿದ್ದು, ಈಕೆ ಕೊಡ್ಲಿಪೇಟೆಯ ಕೃಷಿಕರಾದ ಹರೀಶ್ ಮತ್ತು ಸೀತಾ ದಂಪತಿಯ ಪುತ್ರಿ.
ವಿಜ್ಞಾನಿಗಳಾಗುವೆವು
ಇನ್ನು ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಅನನ್ಯ ಹಾಗೂ ಚಿನ್ಮಯಿ ವಿಜ್ಞಾನಿಗಳಾಗುವ ಗುರಿ ಹೊಂದಿದ್ದಾರೆ. ಅನನ್ಯ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಅನಂತ್ ಕೃಷ್ಣ ಹಾಗೂ ಜ್ಯೋತಿ ದಂಪತಿಯ ಪುತ್ರಿ. ಚಿನ್ಮಯಿ ಸೋಮವಾರಪೇಟೆ ಬೇಳೂರು ರಸ್ತೆ ನಿವಾಸಿ ಶಿಕ್ಷಕರಾದ ಹೆಚ್.ಬಿ. ಕೃಷ್ಣಪ್ಪ ಹಾಗೂ ರಾಜರತ್ನ ದಂಪತಿಯ ಪುತ್ರ.
ಹರ್ಷಿನಿ, ಶಿವಾನಿ ಹಾಗೂ ಅಪೇಕ್ಷಾ ಕೂಡ ವೈದ್ಯರಾಗುವ ಬಯಕೆ ಹೊಂದಿರುವದಾಗಿ ತಿಳಿಸಿದ್ದಾರೆ. ಹರ್ಷಿನಿ ಕುಶಾಲನಗರ ಕೋರ್ಟ್ ರಸ್ತೆ ನಿವಾಸಿ, ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉದ್ಯೋಗಿ ಡಾ. ನೀಲಪ್ಪ ಹಾಗೂ ರಾಧಾಮಣಿ ದಂಪತಿಯ ಪುತ್ರಿ. ಶಿವಾನಿ ಮುಳ್ಳುಸೋಗೆಯ ವೈದ್ಯ ಡಾ. ರವಿಚಂದ್ರ ಹಾಗೂ ಅಕ್ಷತಾ ದಂಪತಿಯ ಪುತ್ರಿ. ಅಪೇಕ್ಷ ಶನಿವಾರಸಂತೆ ಬಿಎಸ್‍ಎಸ್‍ಎನ್‍ಎಲ್ ಉದ್ಯೋಗಿ ಬಿ. ರೇಣುಕಾ ಹಾಗೂ ದಿ. ಶ್ರೀನಿವಾಸ್ ದಂಪತಿಯ ಪುತ್ರಿ.