ಕೂಡಿಗೆ, ಏ. 30 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸುಂದರನಗರ ಸಮೀಪವಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಿರ್ಮಿಸಿರುವ ಬೃಹತ್ ಗೋದಾಮುಗಳಲ್ಲಿ ಖಾಸಗಿ ಮತ್ತು ಸರ್ಕಾರ ಒಡೆತನದ ಆಹಾರ ಧಾನ್ಯಗಳಿಗೆ ಕುಟ್ಟೆಹುಳುಗಳು ಸೇರಿಕೊಂಡಿದ್ದು, ಆ ಹುಳುಗಳು ಉಗ್ರಾಣದ ಸಮೀಪದ ರಸ್ತೆ ಬದಿಯ ಸುಂದರನಗರದ 30 ಕುಟುಂಬಗಳ ಮನೆಗಳಿಗೂ ಸೇರಿಕೊಂಡು ಜನರು ನರಕಯಾತನೆ ಪಡುತ್ತಿದ್ದಾರೆ. ಈ ವರದಿ ‘ಶಕ್ತಿ’ಯಲ್ಲಿ ಪ್ರಕಟಗೊಂಡಿದ್ದು, ವರದಿಗೆ ಸ್ಪಂದಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟ್ಟೆಹುಳುಗಳ ಕಾಟದಿಂದ ಬೇಸತ್ತ ಜನರು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಅವರು ತಕ್ಷಣ ತಮ್ಮ ಸಿಬ್ಬಂದಿಯೊಂದಿಗೆ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ, ಉಗ್ರಾಣದ ಅಧಿಕಾರಿಗಳಿಗೆ ಗೋದಾಮಿನೊಳಗೆ ಹುಳುಗಳು ನಾಶವಾಗಲು ಔಷಧಿ ಸಿಂಪಡಿಸಲು ತುರ್ತುಕ್ರಮಕೈಗೊಳ್ಳಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದರು.
30 ಕುಟುಂಬಗಳು ವಾಸಿಸುತ್ತಿರುವ ಸುಂದರನಗರದ ಕುಟ್ಟೆಹುಳು ಸೇರಿಕೊಂಡಿರುವ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್.ಮಂಜುಳಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತನಾಡಿ, ತುರ್ತಾಗಿ ಈ ಗ್ರಾಮದ ಚರಂಡಿಗಳಿಗೆ ಮತ್ತು ಬೀದಿಗಳಿಗೆ ಔಷಧಿ ಸಿಂಪಡಿಸುವಂತೆ ಆದೇಶಿಸಿದರು. ಮುಂದಿನ ದಿನಗಳಲ್ಲಿ ಉಗ್ರಾಣದ ಅಧಿಕಾರಿಗಳು ಉಗ್ರಾಣದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ತುರ್ತುಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಗ್ರಾಮಕ್ಕೆ ಆರೋಗ್ಯ ಸಹಾಯಕಿಯರು ಮತ್ತು ಸಿಬ್ಬಂದಿಗಳನ್ನು ಕಳುಹಿಸಿ ಇಲ್ಲಿನ ವ್ಯವಸ್ಥೆಯನ್ನು ತಿಳಿದು ಸ್ಥಳದಲ್ಲಿಯೇ ಕುಟ್ಟೆಹುಳುಗಳಿಂದ ಆಗಿರುವ ಕಜ್ಜಿಗಳಿಗೆ ಚಿಕಿತ್ಸೆ ಮತ್ತು ಸೂಕ್ತ ಚುಚ್ಚುಮದ್ದು ನೀಡಲು ಮುಂದಾಗಬೇಕು ಎಂದು ತಿಳಿಸಿದರು. ವೈದ್ಯರು, ಆರೋಗ್ಯ ಸಹಾಯಕಿಯರು ನೀಡುವ ಚಿಕಿತ್ಸೆಯನ್ನು ಪಡೆದು, ಅವರು ತಿಳಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಳ್ಳಿ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರಿಗೂ ಸಲಹೆ ನೀಡಿದರು.
ಪತ್ರಿಕೆಯ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ಸಂಜೆ ಜಿಲ್ಲಾ ಅಹಾರ ಇಲಾಖೆಯ ಉಪ ನಿದೇರ್ಶಕ ರಾಜನ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್ ನಾಯಕ, ಉಗ್ರಾಣ ಅಧಿಕಾರಿ ನಾಗರಾಜ್ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ