ಶ್ರೀಮಂಗಲ, ಏ. 30 : ದಕ್ಷಿಣ ಕೊಡಗಿನ ಹಲವೆಡೆ ಸೋಮವಾರ ರಾತ್ರಿ ಅಬ್ಬರದ ಮಳೆಯಾಗಿದ್ದು, ಗುಡುಗು ಮಿಂಚು ರಭಸದ ಗಾಳಿ ಸಹಿತ ಮಳೆಯಾಗಿದೆ.
ಇದರಿಂದ ಸುಡು ಬಿಸಿಲಿನಿಂದ ಕಾದು ಹೋಗಿದ್ದ ಭೂಮಿ ತಂಪಾಗಿದೆ. ದಕ್ಷಿಣ ಕೊಡಗಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಹುದಿಕೇರಿ, ಪೊನ್ನಂಪೇಟೆ ವ್ಯಾಪ್ತಿಗೆ ಉತ್ತಮ ಮಳೆಯಾಗಿದೆ.
ಬಿರುನಾಣಿ ವ್ಯಾಪ್ತಿಗೆ ಕೇವಲ ಒಂದು ಗಂಟೆಯ ಅವಧಿಯಲ್ಲಿ 1.50 ರಿಂದ 1.75 ಇಂಚಿನಷ್ಟು ಮಳೆಯಾಗಿದೆ. ಮಳೆಯಿಂದ ಬಿರುನಾಣಿ-ಹುದಿಕೇರಿ ನಡುವಿನ ನೂತನ ಸೇತುವೆಯ ಎರಡು ಭಾಗದಲ್ಲಿ ಮಣ್ಣು ಜಾರಿದ್ದು ರಸ್ತೆಯ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆ ಸಮೀಪ ಬಿರುಕು ಕಾಣಿಸಿಕೊಂಡಿದೆ.
ದಕ್ಷಿಣ ಕೊಡಗಿನ ವ್ಯಾಪ್ತಿಗೆ ಉತ್ತಮ ಮಳೆಯಾಗಿದ್ದು ಕಳೆದ 15 ದಿನಗಳಿಂದ ಅಲ್ಲಲ್ಲಿ ಸಾಮಾನ್ಯ ಮಳೆಯಾಗಿತ್ತು. ಈ ಮಳೆಯಿಂದ ಕಾಫಿ ಹಾಗೂ ಕಾಳುಮೆಣಸು ಬೆಳೆಗಳಿಗೆ ಪ್ರಯೋಜನಕಾರಿ ಎಂದು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ವ್ಯಾಪ್ತಿಯ ಬತ್ತಿಬರಡಾಗಿರುವ ಪ್ರಮುಖ ನದಿಗಳಾದ ಲಕ್ಷ್ಮಣ ತೀರ್ಥ, ರಾಮತೀರ್ಥ, ಕೀರಹೊಳೆ ಮತ್ತೆ ಹರಿಯಲು ಇನ್ನಷ್ಟು ಮಳೆ ಆಗಬೇಕಾಗಿದೆ.
ಇತರೆಡೆ ಮಳೆ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ; ಉತ್ತರ ಕೊಡಗಿನ ಅಲ್ಲಲ್ಲಿ ಎರಡು ದಿನಗಳಿಂದ ಸಾಧಾರಣ ಮಳೆಯಾಗಿದೆ. ಇಂದು ಕೂಡ ಮೋಡ ಕವಿದ ವಾತಾವರಣದೊಂದಿಗೆ ಮಳೆಯ ಮುನ್ಸೂಚನೆ ಇತ್ತಾದರೂ, ಸೂರ್ಯ ತಾಪ ಹೆಚ್ಚಾದಂತೆ ಮೋಡಗಳು ಸರಿದು ಬಿಸಲಿನ ಪ್ರಖರತೆ ಏರತೊಡಗುವಂತಾಯಿತು.
ಕುಶಾಲನಗರ :ಕುಶಾಲನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರ್ರಿ ಸುರಿದ ಭಾರಿ ಗಾಳಿ ಮಳೆಗೆ ಮಾರುಕಟ್ಟೆ ಬಳಿಯ ಕೆಇಬಿ ಕಚೇರಿ ಸಮೀಪ ಮಂಟಿ ನಿವಾಸಿ ಮಂಜುನಾಥ್ ಎಂಬವರ ಮನೆಯ ಶೀಟ್‍ಗಳು ಸಂಪೂರ್ಣ ನೆಲಕಚ್ಚಿವೆ. ಮಂಜುನಾಥ್ ತಮ್ಮ ಮನೆಗೆ ಕೆಲವು ದಿನಗಳ ಹಿಂದೆಯಷ್ಟೆ ಶೀಟ್‍ಗಳನ್ನು ಅಳವಡಿಸಿ ಮನೆ ನಿರ್ಮಾಣ ಮಾಡಿದ್ದರು. ದುರಾದೃಷ್ಟವಶಾತ್ ಸೋಮವಾರ ರಾತ್ರಿ ಸುರಿದ ಮಳೆಗೆ ಈ ಎಲ್ಲಾ ಶೀಟ್‍ಗಳು ನೆಲಕಚ್ಚಿದ್ದು ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳು ಕೂಡ ಹಾನಿಗೊಳಗಾಗಿದೆ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಪ.ಪಂ. ಸದಸ್ಯ ಪ್ರಮೋದ್ ಮುತ್ತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಂಟಾಗಿರುವ ನಷ್ಟವನ್ನು ಭರಿಸಿಕೊಡಲು ಸಂಬಂಧಿಸಿದ ಇಲಾಖೆಗೆ ಸೂಚಿಸುವದಾಗಿ ಭರವಸೆ ನೀಡಿದ್ದಾರೆ.
ಇನ್ನೊಂದೆಡೆ ಕುಶಾಲನಗರ ಕಂದಾಯ ಇಲಾಖೆ ಕಚೇರಿ ಮುಂಭಾಗ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಕಟ್ಟಡದ ಮೇಲೆ ಬೃಹತ್ ಮರವೊಂದು ಬೇರು ಸಹಿತ ಬಿದ್ದು ಕಟ್ಟಡ ಹಾನಿಯುಂಟಾಗಿದೆ.