ಸೋಮವಾರಪೇಟೆ,ಏ.30: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ತಾಯಿ-ಮಗಳ ಬರ್ಬರ ಹತ್ಯೆ ನಡೆದಿದ್ದು, ಘಟನೆಗೆ ಆಸ್ತಿ ವೈಷಮ್ಯ ಕಾರಣ ಎನ್ನಲಾಗಿದೆ. ಘಟನೆ ನಡೆದ ಕೆಲ ಗಂಟೆಗಳಲ್ಲೇ ಸ್ಥಳೀಯ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ದೊಡ್ಡಮಳ್ತೆ ಗ್ರಾಮದ ಸ್ಮಶಾನದ ಸಮೀಪವಿರುವ ತೋಟದೊಳಗೆ, ತೋಟದ ಮಾಲೀಕರಾದ ಕವಿತ(45) ಹಾಗೂ ಅವರ ಪುತ್ರಿ ಜಗಶ್ರೀ (17) ಅವರುಗಳ ಮೃತದೇಹ ಕೊಚ್ಚಿ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಇಂದು ಪೂರ್ವಾಹ್ನ 11.30ರ ಸುಮಾರಿಗೆ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.ದೊಡ್ಡಮಳ್ತೆ ಗ್ರಾಮದ ದಿ. ವೀರರಾಜು ಅವರ ಪತ್ನಿ ಕವಿತ ಮತ್ತು ಪುತ್ರಿ ಜಗಶ್ರೀ ಅವರುಗಳು ತಮ್ಮ ದ್ವಿಚಕ್ರ ವಾಹನದಲ್ಲಿ ತೋಟದೊಳಗೆ ತೆರಳಿದ ಸಂದರ್ಭ ಏಕಾಏಕಿ ಕತ್ತಿಯೇಟು ಬಿದ್ದಿರಬಹುದು ಎನ್ನಲಾಗಿದೆ. ತೋಟದ ಗೇಟ್‍ನ ಬಳಿಯಲ್ಲಿಯೇ ಕವಿತ ಅವರು ರಕ್ತದ ಮಡುವಿನಲ್ಲಿ ಅಸುನೀಗಿದ್ದರೆ, ಇದರ ಅನತಿ ದೂರದಲ್ಲಿ ಜಗಶ್ರೀಯ ಮೃತದೇಹ ಕಂಡುಬಂದಿದೆ.
ಕವಿತ ಅವರ ತಲೆ, ಕುತ್ತಿಗೆ ಕೈ, ಕಾಲು ಹಾಗೂ ಜಗಶ್ರೀಯ ಕೈ ಹಾಗೂ ತಲೆ ಭಾಗಕ್ಕೆ ಗಂಭೀರವಾಗಿ ಕಡಿದಿರುವ ಪರಿಣಾಮ ರಕ್ತದ ಮಡುವಿನಲ್ಲಿಯೇ ಈರ್ವರು ಇಹಲೋಕ ತ್ಯಜಿಸಿದ್ದಾರೆ. ತನ್ನ ತಾಯಿ ಮತ್ತು ಸಹೋದರಿ ತೋಟಕ್ಕೆ ತೆರಳಿದ ಕೆಲ ಸಮಯದ ನಂತರ ಅಮ್ಮನ ಮೊಬೈಲ್‍ಗೆ ಕರೆ ಮಾಡಿದ ಪುತ್ರ ಮೇಘಮದನ್‍ರಾಜ್, ಮೊಬೈಲ್ ಸ್ವಿಚ್‍ಆಫ್ ಆಗಿದ್ದರಿಂದ ತೋಟದ ಬಳಿ ತೆರಳಿದ್ದಾನೆ. ಈ ಸಂದರ್ಭ ದುಷ್ಕøತ್ಯ ಬೆಳಕಿಗೆ ಬಂದಿದೆ.
ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆ, ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ತೆರಳಿ ಪರಿಶೀಲನೆ ಮಾಡಿದ್ದಾರೆ.
ಶ್ವಾನದಳ ಭೇಟಿ: ಘಟನಾ ಸ್ಥಳಕ್ಕೆ ಸಂಜೆ 4 ಗಂಟೆ ಸುಮಾರಿಗೆ ಮಡಿಕೇರಿಯಿಂದ ಶ್ವಾನದಳ ಆಗಮಿಸಿತು.
(ಮೊದಲ ಪುಟದಿಂದ) ಇದೇ ಸಂದರ್ಭ ಮೃತದೇಹಗಳನ್ನು ಸಾಗಿಸಲು ಪಟ್ಟಣದಿಂದ ಜೀಪ್ ಆಗಮಿಸಿತು. ಶ್ವಾನ ದಳದಿಂದ ಪರಿಶೀಲನೆ ನಡೆಸದೇ ಮೃತದೇಹವನ್ನು ಸ್ಥಳಾಂತರಿಸಲು ಬಿಡುವದಿಲ್ಲ. ರಸ್ತೆ ತಡೆದು ಪ್ರತಿಭಟಿಸುತ್ತೇವೆ. ಮೊದಲು ಶ್ವಾನದಳದಿಂದ ಪರಿಶೀಲನೆ ನಡೆಯಲಿ ಎಂದು ಸ್ಥಳೀಯರು ಆಗ್ರಹಿಸಿದರು.
ಈ ಸಂದರ್ಭ ಡಿವೈಎಸ್‍ಪಿ ದಿನಕರ್ ಶೆಟ್ಟಿ ಸೇರಿದಂತೆ ಪೊಲೀಸರು ಸ್ಥಳೀಯರನ್ನು ಸಮಾಧಾನಪಡಿಸಿದರು. ಶ್ವಾನದಳದಿಂದ ಪರಿಶೀಲನೆ ನಡೆಸಿದ ನಂತರ ಮೃತದೇಹವನ್ನು ಸಾಗಿಸಲಾಯಿತು.
ನಾಳೆ ಕಾಲೇಜಿಗೆ ಹೋಗುತ್ತಿದ್ದಳು: ಜಗಶ್ರೀ ಹಾಸನದ ಸಂತ ಫಿಲೋಮಿನಾ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ್ದು, ಇದೀಗ ದ್ವಿತೀಯ ಪಿಯುಸಿಗೆ ಉತ್ತೀರ್ಣಳಾಗಿದ್ದಳು. ಕಳೆದ ತಾ. 27ರಂದು ದೊಡ್ಡಮಳ್ತೆಯ ಮನೆಗೆ ಆಗಮಿಸಿದ್ದ ಜಗಶ್ರೀ ಮೇ 1ರಂದು (ನಾಳೆ) ಹಾಸನಕ್ಕೆ ತೆರಳಲು ಸಿದ್ದತೆ ಕೈಗೊಂಡಿದ್ದಳು. ಇಂದು ಅಮ್ಮನೊಂದಿಗೆ ತೋಟಕ್ಕೆ ತೆರಳಿದ ಸಂದರ್ಭ ಹಂತಕನ ಕೃತ್ಯಕ್ಕೆ ಬಲಿಯಾಗಿದ್ದಾಳೆ.
ಅಯ್ಯೋ ಪಾಪ: ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನೂರಾರು ಮಂದಿ ಗ್ರಾಮಸ್ಥರು, ಮಹಿಳೆಯರು ಮೃತ ದೇಹಗಳನ್ನು ಕಂಡು ‘ಅಯ್ಯೋ ಪಾಪ’ ಎನ್ನುತ್ತಿದ್ದರು. ಕನಿಷ್ಟ ಮಗಳನ್ನಾದರೂ ಬಿಡಬಹುದಿತ್ತು. ಏನೂ ತಿಳಿಯದ ಬಾಲಕಿಯನ್ನು ಹೀಗೆ ಮಾಡಿದ್ದಾರಲ್ಲ ಎಂದು ಕನಿಕರ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.
ಘಟನೆಗೆ ಆಸ್ತಿ ವೈಷಮ್ಯ ಕಾರಣ: ಸ್ಥಳೀಯರ ಅಂದಾಜಿನ ಪ್ರಕಾರ ಘಟನೆಗೆ ಆಸ್ತಿ ವೈಷಮ್ಯವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕವಿತ ಅವರ ತೋಟದೊಳಗಿನ ರಸ್ತೆಯ ವಿಚಾರದಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದು, ಕೆಲವೊಂದು ಮೊಕದ್ದಮೆಗಳು ಠಾಣೆಯ ಮೆಟ್ಟಿಲೇರಿದ್ದರೆ, ಉಳಿದವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ.
ಮೂವರ ವಶ?: ಘಟನೆ ಬಳಕಿಗೆ ಬರುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳೀಯ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಹಿಂದಿನಿಂದಲೂ ಆಸ್ತಿ ವಿಚಾರಕ್ಕೆ ಘರ್ಷಣೆ ನಡೆಯುತ್ತಿದ್ದ ಒಂದೇ ಕುಟುಂಬದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.