ಭಾಗಮಂಡಲ, ಏ. 30: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಏಳು ಗ್ರಾಮಗಳ ಪಡಿತರ ಗ್ರಾಹಕರು ಆಹಾರ ಇಲಾಖೆಯ ಅವ್ಯವಸ್ಥೆಯಿಂದ ಸಮಸ್ಯೆ ಅನುಭವಿಸುವಂತಾಗಿದೆ. ಪಡಿತರ ಸಾಮಗ್ರಿ ಪಡೆಯಲು ಇಲಾಖೆಯ ಆದೇಶದನ್ವಯ ಗ್ರಾಹಕರು ಬೆರಳಚ್ಚು ನೀಡಬೇಕಾದದ್ದು ತಲೆನೋವಾಗಿ ಪರಿಣಮಿಸಿದೆ.

ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾಗಮಂಡಲ, ತಾವೂರು, ತಣ್ಣಿಮಾನಿ, ಅಯ್ಯಂಗೇರಿ, ಸಣ್ಣಪುಲಿಕೋಟು, ಚೇರಂಗಾಲ ಹಾಗೂ ಕೋರಂಗಾಲ ಗ್ರಾಮಸ್ಥರು ತಿಂಗಳ ಅಂತ್ಯದಲ್ಲಿ ಎರಡು ಮೂರು ದಿನ ಪಡಿತರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಪಡಿತರದಾರರು ಬೆರಳಚ್ಚು ನೀಡಲು ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪರಿತಪಿಸುವಂತಾಗಿದೆ. ಪಡಿತರ ವಿತರಿಸಲು ಸಿಬ್ಬಂದಿಗಳು ಸಹಕರಿಸಿದರೂ ಆಹಾರ ಇಲಾಖೆ ನಿರ್ಲಕ್ಷ್ಯದಿಂದಾಗಿ ಪರದಾಟ ತಪ್ಪಿದ್ದಲ್ಲ.

ಜಿಲ್ಲೆಯ ವಿವಿಧೆಡೆ ಈಗಾಗಲೇ ಬೆರಳಚ್ಚು ಪಡೆಯುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲೂ ಪಡಿತರಕ್ಕಾಗಿ ಬೆರಳಚ್ಚು ಪಡೆಯುವದನ್ನು ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.