ಮಡಿಕೇರಿ, ಏ. 30: ಎಲ್ಲ ಹಂತದಲ್ಲೂ ಪತ್ರಕರ್ತರು ನಕರಾತ್ಮಕ ಭಾವನೆಯೊಂದಿಗೆ ವರದಿ ಮಾಡಬಾರದು; ಸಕರಾತ್ಮಕ ಚಿಂತನೆ ಇರಬೇಕೆಂದು ಮೈಸೂರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ. ಸಪ್ನಾ ನಾಯಕ್ ಹೇಳಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಉತ್ತಮ ವರದಿಗಳಿಗಾಗಿ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಪತ್ರಕರ್ತರ ಹೊಣೆಗಾರಿಕೆ’ ಎಂಬ ವಿಷಯದಡಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ನಮ್ಮನ್ನು ಮೊದಲು ನಾವು ಬದಲಾಯಿಸಿ ಕೊಳ್ಳಬೇಕಿದೆ, ನಮ್ಮಲ್ಲಿ ಬದಲಾವಣೆ ಆಗದೆ ಸಮಾಜವನ್ನು ಬದಲಾಯಿ ಸೋದು ಹೇಗೆ ಎಂದು ಪ್ರಶ್ನಿಸಿದ ಅವರು, ಪತ್ರಕರ್ತರಲ್ಲಿ ಸಕರಾತ್ಮಕ ಚಿಂತನೆ ಇರಬೇಕೆಂದು ಹೇಳಿದರು. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಅಭಿವೃದ್ಧಿ ಕಾರ್ಯ, ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ರಾಜಕೀಯ, ಅಪರಾಧ, ಸಿನಿಮಾಗಳಿಗೆ ಹೆಚ್ಚಿನ ಪ್ರಾದಾನ್ಯತೆ ನೀಡಲಾಗುತ್ತಿದೆ. ಪತ್ರಕರ್ತರು ವಿಷಯಗಳಿಗೆ ಆದ್ಯತೆ ನೀಡಬೇಕು. ಪ್ರಸ್ತುತ ಯಾವದೇ ಮಾದ್ಯಮಗಳು ಕೂಡ 11 ರಿಂದ 18ನೇ ವಯಸ್ಸಿನವರ ವಿಚಾರಗಳು, ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಹೇಳಿದರು.
ಯಾವದೇ ಒಂದು ಪರಿಣಾಮಕಾರಿ (ಮೊದಲ ಪುಟದಿಂದ) ವರದಿ ಮಾಡಿದ ಬಳಿಕ ವರದಿಯಿಂದಾಗಿರುವ ಪರಿಣಾಮಗಳ ಬಗ್ಗೆ ಪರಿಶೀಲಿಸಿ ತಿಳಿದುಕೊಳ್ಳುವ ಪ್ರವೃತ್ತಿ ಹೊಂದಿರಬೇಕು ಎಂದು ಹೇಳಿದ ಅವರು, ಪ್ರಸ್ತುತ ಸುಳ್ಳು ಸುದ್ದಿಗಳೇ ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು. ಪತ್ರಿಕೋದ್ಯಮದಲ್ಲಿ ಉದ್ಯೋಗ ಖಾತರಿ ಬಗೆಗಿನ ತರಬೇತಿ ಸಿಗುತ್ತಿಲ್ಲ, ಪಠ್ಯಗಳು ವಿಶ್ವಾತ್ಯದ್ದಾಗಿದ್ದು, ಯಾವದೇ ದಾಖಲೀಕರಣದ ವಿಷಯಗಳಿರು ವದಿಲ್ಲ ಎಂದು ಹೇಳಿದ ಅವರು, ಪತ್ರಕರ್ತರಲ್ಲಿ ಸಾಮಾಜಿಕ ಜವಾಬ್ದಾರಿ ಇರಬೇಕು; ಮಾದ್ಯಮದಲ್ಲಿ ಆಗಾಗ್ಗೆ ಅಭಿಯಾನಗಳು ಆಗುತ್ತಿರಬೇಕು, ಪತ್ರಕರ್ತರಿಗೆ ಇರುವಂತಹ ಯೋಜನೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಪ್ರಸ್ತುತ ಪತ್ರಕರ್ತರನ್ನು ಸಮಾಜ ಅನುಮಾನಸ್ಪದವಾಗಿ ನೋಡುವ ಪರಿಸ್ಥಿತಿ ಬಂದೊದಗಿದೆ. ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಸಮಾಜದ ಕೊಳಕನ್ನು ತೆಗೆಯಬೇಕಾದ ನಾವುಗಳೇ ಕೊಳಕು ಮೆತ್ತಿಕೊಂಡರೆ ಹೇಗೆ? ಎಂದು ಪ್ರಶ್ನಿಸಿದರು. ಕೆಲವರು ಸಿರಿವಂತಿಕೆಯ ಆಸೆಯಿಂದ ಅಥವಾ ಯಾವದೋ ಮೋಹಕ್ಕೆ ಒಳಗಾಗುತ್ತಿರುವದು ಸರಿಯಲ್ಲ; ಇಂತಹ ಘಟನೆಗಳಿಂದ ನೈಜ ಪತ್ರಕರ್ತರಿಗೆ ನೋವಾಗುತ್ತದೆ ಎಂದು ಹೇಳಿದರು.
ಪತ್ರಕರ್ತರು ಸಮಾಜದ ವೈದ್ಯರಿದ್ದ ಹಾಗೆ ಎಂದು ಹೇಳಿದ ಅವರು, ತಪ್ಪುಗಳನ್ನು ತಿದ್ದಲು ಹೆಚ್ಚಿನ ಸಾಮಥ್ರ್ಯ ಇದೆ, ಅದನ್ನು ಪಾಲಿಸದಿದ್ದರೆ ಸಮಾಜ ಕ್ಷಮಿಸುವದಿಲ್ಲವೆಂದರು. ನಮ್ಮ ಬೆನ್ನ ಹಿಂದೆ ಯಾರಾದರೂ ನಮ್ಮ ಒಳ್ಳೆಯ ಕಾರ್ಯವನ್ನು ಶ್ಲಾಘಿಸಿದರೆ, ಅದೇ ನಮಗೆ ನಿಜವಾದ ಸರ್ಟಿಫಿಕೇಟ್ ಎಂದು ಹೇಳಿದ ಅವರು ಸಮಾಜದ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಸಂಘ ಎಂದಿಗೂ ಪತ್ರಕರ್ತರ ಜೊತೆಯಲ್ಲಿರುತ್ತದೆ, ಕೊಡಗು ಜಿಲ್ಲಾ ಸಂಘ ರಾಜ್ಯಕ್ಕೆ ಮಾದರಿಯಾಗಿದೆ, ಈ ಹಿಂದೆ ಪ್ರಕೃತಿ ವಿಕೋಪ ಸಂದರ್ಭ ಕೊಡಗಿನ ಸಂತ್ರಸ್ತ ಪತ್ರಕರ್ತರಿಗೆ ನೆರವು ನೀಡುವದಾಗಿ ಹೇಳಿದ್ದು, ಈ ಹಿಂದೆ ರೂ. 2 ಲಕ್ಷ ನೀಡಲಾಗಿತ್ತು. ಇದೀಗ ಇನ್ನುಳಿದ ಮೊತ್ತವನ್ನು ನೀಡುತ್ತಿರುವದಾಗಿ ರೂ. 2.74 ಲಕ್ಷದ ಚೆಕ್ ಅನ್ನು ಸಂಘದ ಅಧ್ಯಕ್ಷೆ ಸವಿತಾ ರೈ ಅವರಿಗೆ ಹಸ್ತಾಂತರಿಸಿದರು. ಪತ್ರಕರ್ತರು ಹೆಚ್ಚಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ ಅಂತಹವರ ರಕ್ಷಣೆಗೆ ಸಂಘ ಬದ್ಧವಾಗಿದೆ ಎಂದರು.
ಅತಿಥಿಯಾಗಿದ್ದ ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಮಾದ್ಯಮದವರು ತಮ್ಮ ಜೀವದ ಹಂಗು ತೊರೆದು ವರದಿಗಾರಿಕೆ ಯೊಂದಿಗೆ ರಕ್ಷಣಾ ಕಾರ್ಯವನ್ನು ಮಾಡಿದ್ದಾರೆ. ಪರಿಸ್ಥಿತಿ ಬಗ್ಗೆ ಜಗತ್ತಿಗೆ ತಿಳಿಯಪಡಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರ ಆಗಮನ ಕುಂಠಿತಗೊಂಡು ಆರ್ಥಿಕ ಸ್ಥಿತಿ ಕುಂಠಿತಗೊಂಡಾಗ ಎಲ್ಲವೂ ಮಾಧ್ಯಮಗಳಿಂದ ಆಗಿರುವದಾಗಿ ಮಾದ್ಯಮದವರನ್ನು ದೂಷಿಸುತ್ತಿದ್ದಾರೆ. ಆದರೆ ಮಾದ್ಯಮದಿಂದಾಗಿ ಕೋಟಿಗಟ್ಟಲೆ ಹಣ, ಸಾಮಗ್ರಿಗಳು ಬಂದಿದ್ದನ್ನು ಯಾರು ಹೇಳುವದಿಲ್ಲ. ಪರಿಹಾರದ ಹಣ ಸಂತ್ರಸ್ತರಿಗೆ ಇನ್ನು ತಲಪಿಲ್ಲ. ಸಾಮಗ್ರಿಗಳು ಕೊಳೆಯುತ್ತಿವೆ ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಅಂದು ಕೆಲವೇ ಪ್ರದೇಶಗಳಲ್ಲಿ ಹಾನಿಯಾಗಿದ್ದು, ಇನ್ನುಳಿದೆಡೆ ಏನೂ ಆಗಿಲ್ಲ. ಅವರುಗಳು ಮನಸು ಮಾಡಿದರೆ ಅವರ ನೆರವು ಸಂತ್ರಸ್ತರಿಗೆ ಸಾಕಾಗುತ್ತಿತ್ತು. ಹೊರಗಿನ ನೆರವು ಬೇಕಾಗಿರಲಿಲ್ಲ. ಈ ಬಗ್ಗೆ ಮಾದ್ಯಮ ಗಳು ಎಲ್ಲಿಯೂ ಭಿತ್ತರಿಸಿಲ್ಲ. ಕೊಡಗಿನ ಗೌರವ ಹೋಗಬಾರದೆಂಬ ಉದ್ದೇಶವಿತ್ತು ಎಂದು ಹೇಳಿದರು. ಇದೀಗ ಸಂತ್ರಸ್ತರಾಗಿರುವ ಮೂವರು ಅಥವಾ ಐದು ಮಂದಿ ಪತ್ರಕರ್ತರಿಗೆ ಮೈಸೂರು ರೋಟರಿ ಜೊತೆಗೂಡಿ ಮನೆ ನಿರ್ಮಿಸಿಕೊಡಲು ಮುಂದಾಗಿ ದ್ದೇವೆ. ಸಂಘದ ಸಲಹೆ ಮೇರೆಗೆ ಈ ಕಾರ್ಯಕ್ಕೆ ಮುಂದಾಗುವದಾಗಿ ಹೇಳಿದ ಅವರು, ಹಲವು ಪ್ರಶಸ್ತಿ ಪಡೆದುಕೊಂಡಿರುವ ತಮ್ಮ ಮೇಲೆ ಸಂಘದ ಋಣವಿದ್ದು, ಮುಂದಿನ ಸಾಲಿನಿಂದ ತಮ್ಮ ಮುತ್ತಜ್ಜ, ಕೊಡಗಿನ ಇತಿಹಾಸ ಪುಸ್ತಕ ಬರೆದಿರುವ ಡಿ.ಎನ್. ಕೃಷ್ಣಯ್ಯ ಅವರ ಹೆಸರಿನಲ್ಲಿ ಮಹಿಳಾ ಪತ್ರಕರ್ತರಿಗಾಗಿ ಪ್ರಶಸ್ತಿ ಸ್ಥಾಪನೆ ಮಾಡುವದಾಗಿ ಘೋಷಿಸಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ಕುಟ್ಟಪ್ಪ ಮಾತನಾಡಿ, ಪ್ರಶಸ್ತಿಗಳಿಗೆ ಒಂದು ಗೌರವ ಇರುತ್ತದೆ. ಆದರೆ ಕೆಲವರು ಹಣ ಕೊಟ್ಟು ಪ್ರಶಸ್ತಿ ಪಡೆದುಕೊಳ್ಳುತ್ತಿರುವದನ್ನು ಕಾಣುತ್ತಿದ್ದೇವೆ. ಅಂತಹ ಪ್ರಶಸ್ತಿಗಳಿಗೆ ಯಾವದೇ ಗೌರವ ಇರುವದಿಲ್ಲವೆಂದು ಹೇಳಿದರು. ಸಂಘದ ಮೂಲಕ ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದೇವೆ. ಪ್ರಶಸ್ತಿ ನೀಡುವದರಿಂದ ಮತ್ತೊಬ್ಬರಿಗೆ ಸ್ಫೂರ್ತಿ ಸಿಕ್ಕಂತಾಗುತ್ತದೆ ಎಂದು ಹೇಳಿದ ಅವರು, ಪತ್ರಕರ್ತರು ನಮ್ಮೊಳಗೆ ಚಿಂತನೆ ಮಾಡಿಕೊಳ್ಳಬೇಕು, ಕೆಲಸದಲ್ಲಿ ಆಸಕ್ತಿ ಇರಬೇಕು, ಹೊಸತನಗಳತ್ತ ಚಿಂತನೆ ಹರಿಸಬೇಕೆಂದರು.
ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಹೆಚ್. ಆರ್. ಹರೀಶ್‍ಕುಮಾರ್ ಯಾರಲ್ಲಿಯೂ ಕಾಲೆಳೆಯುವ ಪ್ರವೃತ್ತಿ ಇರಬಾರದು, ತಪ್ಪು ಮಾಡುವವರನ್ನು ತಿದ್ದಿ ಸರಿಪಡಿಸುವತ್ತ ಗಮನ ಹರಿಸಬೇಕಿದೆ. ಸಮಾಜವನ್ನು ತಿದ್ದುವ ಕೆಲಸದಲ್ಲಿ ಭಾಗಿಯಾಗೋಣವೆಂದು ಆಶಿಸಿದರು. ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೆಲವರು ಪ್ರಶಸ್ತಿ ಬಗ್ಗೆ ಊಹಾಪೋಹದ ಮಾತುಗಳನ್ನಾಡು ತ್ತಿರುವದು ಗಮನಕ್ಕೆ ಬಂದಿದೆ. ಇದರಲ್ಲಿ ಯಾರದ್ದೂ ಹಸ್ತಕ್ಷೇಪವಿಲ್ಲ. ಪ್ರಾಮಾಣಿಕವಾಗಿ ಅರ್ಹರಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿದರು. ಮುಂದಿನ ಸಾಲಿನಲ್ಲಿ ಕನಿಷ್ಟ 10 ಪ್ರಶಸ್ತಿಗಳನ್ನು ಟಿ.ವಿ. ಮಾದ್ಯಮಗಳ ವರದಿಗಳಿಗಾಗಿ ಸ್ಥಾಪಿಸುವ ಉದ್ದೇಶ ಹೊಂದಿರು ವದಾಗಿ ಹೇಳಿದರು.
ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಪರಿಸರ ಮತ್ತು ನೈರ್ಮಲ್ಯ ವರದಿಗೆ ಹಾಗೂ ತೋಟಗಾರಿಕಾ ವರದಿಗೆ ಪ್ರಶಸ್ತಿ ಪಡೆದುಕೊಂಡಿರುವ ‘ಶಕ್ತಿ’ ಉಪ ಸಂಪಾದಕ ಕುಡೆಕಲ್ ಸಂತೋಷ್, ಮಾನವೀಯ ವರದಿ ಪ್ರಶಸ್ತಿ ಪಡೆದು ಕೊಂಡಿರುವ ‘ಶಕ್ತಿ’ ವರದಿಗಾರ್ತಿ ರಜಿತಾ ಕಾರ್ಯಪ್ಪ ಸೇರಿದಂತೆ ಹೆಚ್.ಕೆ. ಜಗದೀಶ್, ಉದಿಯಂಡ ಜಯಂತಿ, ನವೀನ್ ಸುವರ್ಣ, ಎಚ್. ಟಿ. ಅನಿಲ್, ಸುನಿಲ್ ಪೊನ್ನೆಟ್ಟಿ, ಸಣ್ಣುವಂಡ ಕಿಶೋರ್ ನಾಚಪ್ಪ, ಹಿರಿಕರ ರವಿ, ವಿಘ್ನೇಶ್ ಭೂತನಕಾಡು, ಎಂ.ಎನ್. ನಾಸಿರ್, ಆರ್. ಸುಬ್ರಮಣಿ, ಕೆ.ಎ. ಆದಿತ್ಯ, ಸತೀಶ್ ನಾರಾಯಣ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್. ಮಹೇಶ್ ನಿರೂಪಿಸಿದರೆ, ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಸ್ವಾಗತಿಸಿದರು. ಆನಂದ್ ಕೊಡಗು ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರೆ, ಅರುಣ್ ಕೂರ್ಗ್ ವಂದಿಸಿದರು.