ಭಾಗಮಂಡಲ, ಏ.30 : ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ಏರ್ಪಡಿಸಲಾಗಿದ್ದ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪರ್ಲಕೋಟ ತಂಡವು 26ನೇ ವರ್ಷದ ಕೆದಂಬಾಡಿ ಕಪ್‍ನ್ನು ತನ್ನದಾಗಿಸಿಕೊಂಡಿತು. ಮಂಗಳವಾರ ಕೆದಂಬಾಡಿ ಆಟದ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪರ್ಲಕೋಟಿ ತಂಡವು ಅಯ್ಯಂಡ್ರ ತಂಡದ ವಿರುದ್ದ ಜಯಭೇರಿ ಬಾರಿಸಿತು. ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ತಂಡವು ಮೂರು ಓವರ್‍ನಲ್ಲಿ 38ರನ್‍ಗಳಿಸಿತು. ಏಳನೇ ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 52 ರನ್‍ಗಳಿಸಿತು. ಅನುಭವಿ ಆಟಗಾರರಿದ್ದ ಪರ್ಲಕೋಟಿ ತಂಡವನ್ನು ಅಯ್ಯಂಡ್ರ ತಂಡ ಕಟ್ಟಿಹಾಕಿದ ಪರಿಣಾಮ ಪರ್ಲಕೋಟಿ ತಂಡವು ಹತ್ತು ಓವರ್‍ನಲ್ಲಿ ಏಳು ವಿಕೆಟ್ ಕಳೆದುಕೊಂಡು ಅಯ್ಯಂಡ್ರ ತಂಡಕ್ಕೆ 67 ರನ್‍ಗಳ ಗುರಿಯನ್ನಿಟ್ಟಿತು. ನಂತರ ಬ್ಯಾಟಿಂಗ್ ಮಾಡಿದ ಅಯ್ಯಂಡ್ರ ತಂಡ ಮೊದಲ ಓವರ್‍ನಲ್ಲಿ ಒಂದು ವಿಕೆಟ್ ಕಳೆದುಕೊಂಡಿತು. ಯಾವುದೇ ರನ್ ಗಳಿಸಲಿಲ್ಲ. ಅಯ್ಯಂಡ್ರ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಪರ್ಲಕೋಟಿ ತಂಡದಿಂದಾಗಿ ಅಯ್ಯಂಡ್ರ ತಂಡದ ಒಂದೊಂದೆ ವಿಕೆಟ್ ಪತನಗೊಂಡ ಪರಿಣಾಮ ಅಯ್ಯಂಡ್ರ ತಂಡ ಹತ್ತು ಓವರ್‍ನಲ್ಲಿ ಕೇವಲ 34 ರನ್ ಗಳಿಸಿತು.

(ಮೊದಲ ಪುಟದಿಂದ) ಅಂತಿಮವಾಗಿ ಪರ್ಲಕೋಟಿ ತಂಡಕ್ಕೆ 33 ರನ್‍ಗಳ ಗೆಲವು ಲಭಿಸಿತು.ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡ 4 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು. ಪರ್ಲಕೋಟಿ ತಂಡ ಮೂರು ವಿಕೆಟ್ ನಷ್ಟಕ್ಕೆ 51 ರನ್‍ಗಳಿಸಿ ಅಂತಿಮ ಸುತ್ತು ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೆದಂಬಾಡಿ ತಂಡವು 40 ರನ್ ಗಳಿಸಿದರೆ ಅಯ್ಯಂಡ್ರ ತಂಡವು ಎರಡು ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಕೆದಂಬಾಡಿ ಮತ್ತು ದಂಬೆಕೋಡಿ ತಂಡಗಳ ನಡುವೆ ಪಂದ್ಯ ನಡೆಯಿತು. ಕೆದಂಬಾಡಿ ತಂಡವು ಐದು ಓವರ್‍ನಲ್ಲಿ 33 ರನ್ ಗಳಿಸಿತು. ದಂಬೆಕೋಡಿ ತಂಡವು ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕೆದಂಬಾಡಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಅಯ್ಯಂಡ್ರ ಚೇತನ್, ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಪರ್ಲಕೋಟಿ ಲಕ್ಷಿತ್, ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಪರ್ಲಕೋಟಿ ರಕ್ಷಿತ್, ಪಡೆದರು. ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಪರ್ಲಕೋಟಿ ಸತ್ಯ ಗಳಿಸಿದರೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪರ್ಲಕೋಟಿ ಲಕ್ಷಿತ್ ಪಡೆದರು. ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪರ್ಲಕೋಟಿ ಸಜನ್ ಪಾಲಾಯಿತು.

ಸಮಾರೊಪ ಸಮಾರಂಭ

ಗೌಡ ಕುಟುಂಬಗಳ ನಡುವೆ ಏರ್ಪಡಿಸಲಾಗಿದ್ದ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು. ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆದಂಬಾಡಿ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆನೆರ ಜಾನಕಿ ಮೋಹನ್ ಮಾತನಾಡಿ ಇಂದಿನ ದಿನಗಳಲ್ಲಿ ಜನಾಂಗದ ಸಂಸ್ಕøತಿ ಮರೆಯಾಗುತ್ತಿದೆ. ಆತ್ಮೀಯತೆ ನಶಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಕ್ರೀಡಾಕೂಟಗಳಿಂದ ಜನಾಂಗ ಭಾಂದವರಲ್ಲಿ ಸೌಹಾರ್ದ ವೃದ್ಧಿಸಲು ಸಹಕಾರಿಯಾಗಲಿದೆ ಎಂದರು.ಪ್ರತಿವರ್ಷ ನಡೆಸುವ ಕ್ರೀಡಾಕೂಟಗಳ ದಾಖಲೆಯ ನಿರ್ವಹಣೆಯನ್ನು ಮಾಡುವದರಿಂದ ಮುಂದಿನ ಪೀಳಿಗೆಗೆ ಸಹಕಾರಿ ಯಾಗಲಿದೆ. ಪ್ರತಿ ಜನಾಂಗದವರು ಯಾವದೇ ಕೆಲಸ ಮಾಡುವ ಮುನ್ನ ಕುಲದೇವತೆಯನ್ನು ಸ್ಮರಿಸಿ ಕೆಲಸ ನಿರ್ವಹಿಸಬೇಕು ಎಂದರು. ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರೀಸ್ ಮಾತನಾಡಿ ಯುವಜನರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ದೂರವಿದ್ದು ಯುವಜನರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಕೆದಂಬಾಡಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಕೆದಂಬಾಡಿ ರಾಜು, ಉಪಸ್ಥಿತರಿದ್ದರು. ನಂತರ ಅತಿಥಿಗಳು ವಿಜೇತ ತಂಡಗಳಿಗೆ ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಿದರು.

-ಸುನಿಲ್ ಕುಯ್ಯಮುಡಿ