ಕುಶಾಲನಗರ, ಏ. 30: ಕುಶಾಲನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಇಬ್ಬರು ಮಹಿಳೆಯರ ಎರಡು ವಿಶಿಷ್ಟ ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಲೆಕೆಡಿಸಿಕೊಂಡಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಕುಶಾಲನಗರದ ಬಡಾವಣೆಯೊಂದರ ಗೃಹಿಣಿಯೊಬ್ಬರು ಉಪಗ್ರಹದ ಉಪಟಳದಿಂದ ತನ್ನನ್ನು ರಕ್ಷಿಸಿ ಎಂದು ಪೊಲೀಸರ ದುಂಬಾಲು ಬಿದ್ದಿದ್ದರೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ತನ್ನನ್ನು ಹಾವಿನ ಸಮಸ್ಯೆಯಿಂದ ರಕ್ಷಿಸಿ ಎಂದು ಬೇಡಿಕೊಳ್ಳುತ್ತಿರುವ ಪ್ರಕರಣಗಳು ಇದಾಗಿವೆ.

ಪ್ರಕರಣ 1: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದು ತನ್ನ ಮನೆಗೆ ಉಪಗ್ರಹವೊಂದರ ಉಪಟಳ ಅಧಿಕವಾಗಿದೆ. ಅದರಿಂದ ತನಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ. ಉಪಗ್ರಹದಿಂದ ಹೊರ ಸೂಸುವ ಕಿರಣಗಳಿಂದ ತನ್ನ ದೇಹದ ಮೇಲೆ ಪರಿಣಾಮ ಉಂಟಾಗುತ್ತಿದೆ. ಇದರಿಂದ ಮೈಕೈ ನೋವಿನೊಂದಿಗೆ ತನಗೆ ದಿನನಿತ್ಯದ ಕೆಲಸ ಮಾಡಲು ಸಮಸ್ಯೆ ಉಂಟಾಗುತ್ತಿದೆ.

ಆ ಉಪಗ್ರಹವನ್ನು ತಕ್ಷಣ ಸ್ಥಗಿತಗೊಳಿಸಲು ಕಾನೂನು ಕ್ರಮ ಕೈಗೊಳ್ಳಿ. ಸಮಸ್ಯೆಯನ್ನು ನಿವಾರಿಸಿಕೊಡಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವದು ಬೆಳವಣಿಗೆಯಾಗಿದೆ. ಇದರಿಂದ ದಾರಿ ಕಾಣದೆ ಪೊಲೀಸ್ ಅಧಿಕಾರಿಗಳು ಮಹಿಳೆಯನ್ನು ಹಲವು ರೀತಿಯಲ್ಲಿ ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಮಹಿಳೆ ಮಾತ್ರ ಭ್ರಮೆಯಿಂದ ಹೊರಬರುವಲ್ಲಿ ವಿಫಲರಾಗಿದ್ದಾರೆ.

ಪ್ರಕರಣ 2: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರದ್ದು ಬೇರೆಯೇ ಕಥೆಯಾಗಿದೆ. ಮನೆಯಲ್ಲಿರುವ ಪೊಟರೆಯೊಂದರಿಂದ ಹಾವೊಂದು ಹೊರಬಂದು ಮನುಷ್ಯ ರೂಪ ತಾಳಿ ತನ್ನೊಂದಿಗೆ ಸಂಭಾಷಣೆ ನಡೆಸುತ್ತಿದೆ. ಇದರಿಂದ ತನಗೆ ತುಂಬಾ ಸಮಸ್ಯೆ ಸೃಷ್ಟಿಯಾಗಿದೆ. ಈ ಸಮಸ್ಯೆಯಿಂದ ಮುಕ್ತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗಾಗ್ಗೆ ಪೊಲೀಸ್ ಠಾಣೆಗೆ ಬರುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಪೊಲೀಸರಿಗೆ ಇದೊಂದು ತಲೆನೋವಿನ ಪ್ರಕರಣವಾಗಿ ಪರಿಣಮಿಸಿದೆ.

ಈ ಎರಡೂ ಪ್ರಕರಣಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಮಹಿಳೆಯರ ಕುಟುಂಬ ಸದಸ್ಯರನ್ನು ಕರೆಸಿ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಆದರೆ ಫಲಕಾರಿಯಾಗುತ್ತಿಲ್ಲ. ಕಾರಣ ಈ ಎರಡೂ ಪ್ರಕರಣಗಳು ಕೂಡ ಒಂದು ರೀತಿಯ ಮಾನಸಿಕ ಖಾಯಿಲೆ ಎನ್ನಲಾಗುತ್ತಿದೆ. - ಸಿಂಚು