ಮಡಿಕೇರಿ, ಏ. 30: ಮಡಿಕೇರಿ ನಗರಸಭೆಯಲ್ಲಿ ವಾರ್ಷಿಕ ಪಾವತಿ ಮಾಡಬೇಕಾದ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಈ ಬಾರಿ ತೀರಾ ಏರುಪೇರಾಗಿದೆ. ಕಳೆದ ಬಾರಿ ರೂ. 6,500 ಪಾವತಿಸಿದ್ದ ಪ್ರಾಮಾಣಿಕ ವ್ಯಕ್ತಿ ಈ ಬಾರಿ 17,500 ಪಾವತಿಸಬೇಕೆಂದು ಬಿಲ್ ಬಂದಿದೆ! 20 ಸಾವಿರ ಪಾವತಿಸಿದ್ದವರಿಗೆ ರೂ. 35 ಸಾವಿರಕ್ಕೆ ಏರಿಕೆಯಾಗಿದ್ದು, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.ವಾರ್ಷಿಕ ತೆರಿಗೆ 100-200-300 ರಷ್ಟು ಹೆಚ್ಚಾಗಲು ಕಾರಣ ಕೇಳಿದರೆ ಮಡಿಕೇರಿ ನಗರಸಭೆಯಲ್ಲಿ ಮಾಹಿತಿಯಿಲ್ಲ. ಕಾರಣ ಎಲ್ಲವೂ ನಿಯಂತ್ರಿಸಲ್ಪ ಡುತ್ತಿರುವದು ಬೆಂಗಳೂರಿನಲ್ಲಿ. ಜೊತೆಗೆ ಸರ್ವರ್‍ಗಳೂ ಆಗಾಗ್ಗೆ ಕೈಕೊಡುತ್ತಿದ್ದು, ನಗರಸಭಾ ಸಿಬ್ಬಂದಿ ಸಾರ್ವಜನಿಕರಿಗೆ ಉತ್ತರಿಸಿ ಹೈರಾಣಾಗುತ್ತಿದ್ದಾರೆ.ಇಷ್ಟು ವರ್ಷ ಮುದ್ರಿತ ಅರ್ಜಿಯಲ್ಲಿ ನಮ್ಮ ನಮ್ಮ ಕಟ್ಟಡದ ವಿವರ, ಸರ್ವೆ ನಂಬರ್, ಬಡಾವಣೆ ವಿವರಗಳನ್ನು ನಮೂದಿಸಿ ಅರ್ಜಿ ಭರ್ತಿ ಮಾಡಿ ಹಣ ಪಾವತಿಸಲಾಗುತ್ತಿತ್ತು. ಈ ವರ್ಷ ಪ್ರತಿಯೊಂದೂ ಕಟ್ಟಡದ ವಿವರವನ್ನು ಕಂಪ್ಯೂಟರ್‍ಗೆ ತುಂಬಲಾಗಿದೆ. ತೆರಿಗೆ ಪಾವತಿಸುವವರು ಕಟ್ಟಡ ಸಂಖ್ಯೆ, ಸರ್ವೆ ನಂಬರ್, ಬಡಾವಣೆ ವಿವರ ಕೊಟ್ಟರಾಯಿತು. ತನ್ನಿಂದ ತಾನಾಗಿಯೇ ಪಾವತಿಸಬೇಕಾದ ಮೊತ್ತವನ್ನು ಕಂಪ್ಯೂಟರ್ ಲೆಕ್ಕ ಹಾಕಿ ಒಂದು ಮುದ್ರಿತ ಚಲನ್ ಅನ್ನು ನೀಡುತ್ತದೆ.ಯಾರಿಂದ ದರ ನಿಗದಿ?ಪಾವತಿಸಬೇಕಾದ ಮೊತ್ತವನ್ನು ಕಂಪ್ಯೂಟರ್ ಲೆಕ್ಕ ಹಾಕಬೇಕಾದರೂ ಮೂಲ ದರದ ಮಾಹಿತಿಯನ್ನು ಕಂಪ್ಯೂಟರ್‍ಗೆ

(ಮೊದಲ ಪುಟದಿಂದ) ತುಂಬುವದಾದರು ಯಾರು? ಈ ಬಗ್ಗೆ ನಗರಸಭೆಯಲ್ಲಿ ವಿಚಾರಿಸಿದರೆ, ಸರಕಾರ ಹೊಸ ಮಾರುಕಟ್ಟೆ ದರವನ್ನು ನಿಗದಿಪಡಿಸಿದ್ದು, ಅದನ್ನು ಬೆಂಗಳೂರಿನಲ್ಲಿಯೇ ನಿರ್ವಹಿಸಲಾಗಿದೆ ಎಂದು ವಿವರಿಸುತ್ತಾರೆ.

ಆದರೆ, ಕಳೆದ ವರ್ಷ ರಾಜ್ಯ ಸರಕಾರ ರಾಜ್ಯದ ಎಲ್ಲೆಡೆ ದರ ಪರಿಷ್ಕರಿಸಿದರೂ ಕೊಡಗು ಜಿಲ್ಲೆಯಲ್ಲಿ ಮಳೆ ಪ್ರವಾಹ ಬಂದ ಕಾರಣ ಅದನ್ನು ಜಾರಿಗೊಳಿಸಿರಲಿಲ್ಲ. ಈ ಬಗ್ಗೆ ಮಡಿಕೇರಿಯ ಉಪ ನೋಂದಣಾಧಿಕಾರಿಗಳೂ ಖಚಿತಪಡಿಸಿದ್ದು, ಹಳೆಯ ದರದಲ್ಲಿಯೇ ಆಸ್ತಿಗಳು ನೋಂದಾವಣೆ ಆಗುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದಲ್ಲಿ ತಪ್ಪು ಮಾಹಿತಿ ಕಂಪ್ಯೂಟರ್‍ಗೆ ಹೋದದ್ದು ಎಲ್ಲಿಂದ? ಇದಕ್ಕೆ ಯಾರು ಜವಾಬ್ದಾರಿ.

ಈ ಎಲ್ಲ ಗೊಂದಲಗಳ ನಡುವೆ ಇಂದು ನಗರಸಭೆಯಲ್ಲಿ ಸರ್ವರ್ ಕೈಕೊಟ್ಟಿದ್ದರಿಂದ ನೂರಾರು ಮಂದಿ ತೆರಿಗೆ ಪಾವತಿಸದೆ ಹಿಂತಿರುಗಬೇಕಾಯಿತು. ಶೆ. 5ರ ರಿಯಾಯಿತಿ ಪಡೆಯಲು ಇಂದು ಹಣ ಪಾವತಿಗೆ ಕೊನೆಯ ದಿನವಾಗಿದ್ದು, ತಾಂತ್ರಿಕ ತೊಂದರೆ ಹಾಗೂ ದರ ಪರಿಷ್ಕರಣೆಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಅನೇಕರು ಹಣ ಕಳೆದುಕೊಳ್ಳುವಂತಾಯಿತು. ಈ ಬಗ್ಗೆ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕ ಅಹವಾಲುಗಳನ್ನು ಕೇಳಲು ತುರ್ತು ಸಭೆ ನಡೆಸುವದು ಒಳಿತು. -ಚಿದ್ವಿಲಾಸ್