ಕೂಡಿಗೆ, ಮೇ 2: ಇತ್ತೀಚೆಗೆ ಬಾಣಾವರ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದರ ಎಡಗಾಲು ಗಾಯಗೊಂಡಿದ್ದನ್ನು ಗಮನಿಸಿದ್ದ ಅರಣ್ಯ ಇಲಾಖೆ ಕಾಡಾನೆಯನ್ನು ಹರಸಾಹಸದಿಂದ ಸಾಕಾನೆಗಳೊಂದಿಗೆ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳ ಸಲಹೆಯಂತೆ ಚುಚ್ಚುಮದ್ದು ನೀಡುವ ಮೂಲಕ ಹಿಡಿದು ಚಿಕಿತ್ಸೆಗೆ ಒಳಪಡಿಸಿತ್ತಾದರೂ, ಕಾಡಾನೆ ಸಾವನ್ನಪ್ಪಿದೆ.
ಒಂದು ತಿಂಗಳಿನಿಂದ ಪ್ರತಿದಿನವು ಗಾಯಗೊಂಡಿದ್ದ ಕಾಡಾನೆಗೆ ಇಲಾಖೆಯ ಪಶು ವೈದ್ಯಾಧಿಕಾರಿ ಮುಜೀಬ್ ಅವರು ಸಿಬ್ಬಂದಿಗ ಳೊಂದಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕಾವಾಡಿಗರು, ಮಾವುತರು ನೀಡುವ ಆಹಾರವನ್ನು ಸೇವಿಸುತ್ತಾ ಮನುಷ್ಯರೊಂದಿಗೆ ಪಳಗುವ ಹಂತಕ್ಕೆ ತಲಪಿತ್ತು. ಗಾಯವು ಒಣಗುತಿದ್ದುದ್ದು ಕಂಡುಬಂದಿತ್ತು ಆದರೆ ಇಂದು ಎಂದಿನಂತೆ ಆಹಾರ ನೀಡಲು ತೆರಳಿದ ಸಂದರ್ಭ ಕಾಡಾನೆಯು ಸಾವನ್ನಪ್ಪಿದ್ದು ಇಲಾಖೆಗೆ ಆಘಾತ ಮೂಡಿಸಿದೆ.
ಈ ಕಾಡಾನೆಯು ಪೂರ್ಣ ಚೇತರಿಕೆಗೊಂಡ ಬಳಿಕ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಚಿಂತನೆ ನಡೆದಿತ್ತು. ಇಲಾಖೆಯವರ ಪ್ರಕಾರ ಕಾಡಾನೆಯು ಚಿಕಿತ್ಸೆಗೆ ಒಳಪಟ್ಟ ಒಂದು ವಾರದ ನಂತರ ಸ್ಥಳೀಯರು ನೀಡುತ್ತಿದ್ದ ಗೆಡ್ಡೆ-ಗೆಣಸು, ಬಾಳೆಗೊನೆ, ಕಬ್ಬುಗಳನ್ನು ಯಾವದೇ ರೀತಿಯಲ್ಲಿ ಘೀಳಿಡದೆ ತಿನ್ನುತ್ತಿತ್ತು. ಸಾಕಾನೆಯ ಸಹಕಾರ ದೊಂದಿಗೆ ಚಿಕಿತ್ಸೆ ಹಾಗೂ ಔಷಧಿ ನೀಡುವ ಸಂದರ್ಭ ತೊಂದರೆ ನೀಡದೆ ಚಿಕಿತ್ಸೆ ಪಡೆಯುತ್ತಿತ್ತು. ಆದರೇ ಕಾಡಾನೆಯ ಸಾವಿಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಮೃತ ಕಾಡಾನೆಯನ್ನು ಸ್ಥಳದಲ್ಲೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಕಾರಣ ತಿಳಿದುಬರಲಿದೆ.
ಕಾಡಾನೆಯು ಚಿಕಿತ್ಸೆ ಪಡೆಯುತ್ತಿದ್ದ ಸ್ಥಳದ ಸಮೀಪದ ಕಾಡಿನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸಂದರ್ಭ ಸೋಮವಾರ ಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್, ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹಾದೇವನಾಯಕ್ ಸೇರಿದಂತೆ ಸಿಬ್ಬಂದಿ ಇದ್ದರು.
-ಕೆ.ಕೆ.ನಾಗರಾಜಶೆಟ್ಟಿ.