ಮಡಿಕೇರಿ, ಮೇ 2: ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಕಾಲೂರು ಗ್ರಾಮದ ಗದ್ದೆಗಳಲ್ಲಿ ಶೇಖರಣೆಗೊಂಡಿರುವ ಮರಳು ತೆಗೆದು ಸಾಗಿಸುವ ವಿಚಾರದಲ್ಲಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ನಾಲ್ಕು ಲಾರಿಗಳ ಸಮೇತ ಬುಧವಾರ ಕಾಲೂರಿಗೆ ಬಂದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪರಿಹಾರ ನೀಡದ ಹೊರತು ಮರಳು ತೆಗೆಯಲು ಅವಕಾಶ ನೀಡುವದಿಲ್ಲ. ಮೊದಲು ಗದ್ದೆಯಲ್ಲಿ ಬಿದ್ದಿರುವ ಮಣ್ಣು ತೆರವು ಮಾಡಿಕೊಡಿ. ಆ ಮೇಲೆ ಮರಳು ಕೊಂಡೊಯ್ಯಿರಿ’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಬಳಿಕ ಮಡಿಕೇರಿ ತಹಶೀಲ್ದಾರ್ ಸಹ ಸ್ಥಳಕ್ಕೆ ಭೇಟಿ ನೀಡಿ, ಕೆಲವರು ಸಂಗ್ರಹಿಸಿರುವ ಮರಳು ತೆಗೆಯಲು ಅವಕಾಶ ಮಾಡಿಕೊಡಿ, ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅದಕ್ಕೂ ಬಗ್ಗದ ಗ್ರಾಮಸ್ಥರು, ಮೊದಲು ನಮಗೆ ಬೆಳೆ ಪರಿಹಾರ ನೀಡಿ, ಆಮೇಲೆ ಮರಳನ್ನು ತೆಗೆದುಕೊಂಡು ಹೋಗಿ ಎಂದು ಪಟ್ಟುಹಿಡಿದರು.

ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ಮರಳು ತೆಗೆಯಲು ಬಿಡಲಿಲ್ಲ. ಕಾರ್ಮಿಕರ ದಿನದ ರಜೆಯಲ್ಲೂ ದಾಳಿಗೆ ಕಾಲೂರಿಗೆ ಬಂದಿದ್ದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ಸಾದರು.