ಸೋಮವಾರಪೇಟೆ, ಮೇ 2: ಸೋಮವಾರಪೇಟೆ ಸೇರಿದಂತೆ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ದನಕಳ್ಳತನದ ಹಿಂದೆ ಬಂಟ್ವಾಳದ ಖದೀಮರ ಕೈವಾಡವಿರುವದು ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷದ ಹಿಂದೆ (12.05.2017) ಕೊಡ್ಲಿಪೇಟೆಯಲ್ಲಿ ನಡೆದಿದ್ದ ದನಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಇಮ್ರಾನ್ ಎಂಬಾತ ಇದೀಗ ಬಂಟ್ವಾಳದಲ್ಲಿಯೂ ದನಕಳ್ಳತನ ಮಾಡುವ ಸಂದರ್ಭ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆ ಮೂಲಕ ಸೋಮವಾರಪೇಟೆ ವ್ಯಾಪ್ತಿಯಲ್ಲೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವದು ತಿಳಿದುಬಂದಿದೆ.

ಕಳೆದ ಎರಡು ವರ್ಷದ ಹಿಂದೆ ಕೊಡ್ಲಿಪೇಟೆಯಲ್ಲಿ ಟೆಂಪೋ ಟ್ರಾವೆಲರ್ ವಾಹನದ ಮೂಲಕ ಅಕ್ರಮವಾಗಿ ದನಗಳನ್ನು ಸಾಗಾಟಗೊಳಿಸುತ್ತಿದ್ದ ಸಂದರ್ಭ ಬೆನ್ನತ್ತಿದ ಪೊಲೀಸರ ಮೇಲೆಯೇ ವಾಹನವನ್ನು ಹತ್ತಿಸಿ ಹತ್ಯೆಗೆ ಯತ್ನಿಸಲಾಗಿತ್ತು. ಆದರೂ ಪಟ್ಟು ಬಿಡದ ಪೊಲೀಸರು ಸಕಲೇಶಪುರ ಸಮೀಪದ ಹಾನ್‍ಬಾಳ್ ಎಂಬಲ್ಲಿ ಟೆಂಪೋ ವಾಹನ ಸಹಿತ ಈರ್ವರು ಗೋ ಕಳ್ಳರು ಹಾಗೂ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ 8 ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದರು.

ಗೋ ಕಳ್ಳತನ ನಡೆಸಿ ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ವಾಹನವನ್ನು ತಡೆಯಲು ಮುಂದಾದ ಸಂದರ್ಭ ವಾಹನವನ್ನು ನಮ್ಮ ಮೇಲೆ ಹತ್ತಿಸಿ ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಶೆಟ್ಟಿ ಮತ್ತು ಹರೀಶ್ ಅವರುಗಳು ಶನಿವಾರಸಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂಟ್ವಾಳದ ಇಮ್ರಾನ್, ಮಹಮ್ಮದ್ ಮನ್ಸೂರ್, ಮಹಮ್ಮದ್ ಷರೀಫ್, ಆರಿಫ್, ಅಜರ್, ಸಮೀರ್, ಅಕ್ಬರ್, ಕುಶಾಲನಗರದ ದಿನೇಶ್ ಅವರುಗಳ ವಿರುದ್ಧ ದೂರು ದಾಖಲಾಗಿತ್ತು.

ಈ ದೂರಿನ ಆರೋಪಿ ಇಮ್ರಾನ್ ಮಾತ್ರ ಇದುವರೆಗೂ ಪೊಲೀಸರಿಗೆ ಸಿಕ್ಕದೇ ತಲೆಮರೆಸಿ ಕೊಂಡಿದ್ದ ಎನ್ನಲಾಗಿದೆ. ಇದೀಗ ನಿನ್ನೆ ದಿನ ಬಂಟ್ವಾಳ ವ್ಯಾಪ್ತಿಯಲ್ಲಿ ದನಗಳನ್ನು ಕಳವು ಮಾಡಿ ರಿಟ್ಜ್ ಕಾರಿನಲ್ಲಿ ಸಾಗಿಸುತ್ತಿದ್ದ ಸಂದರ್ಭ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಕಳೆದ ಮೂರು ತಿಂಗಳ ಹಿಂದಷ್ಟೇ ಸೋಮವಾರಪೇಟೆಯ ಅಲೋಕ ರೆಸ್ಟೋರೆಂಟ್ ಮುಂಭಾಗ ರಾತ್ರಿ ವೇಳೆ ಝೈಲೋ ಕಾರಿನಲ್ಲಿ ಗೋವುಗಳನ್ನು ಕಳವು ಮಾಡಲಾಗಿದ್ದು, ಈ ಕಳ್ಳತನದಲ್ಲೂ ಮಂಗಳೂರಿನ ಗ್ಯಾಂಗ್‍ನ ಕೈವಾಡವಿದೆಯೇ ಎಂಬ ಬಗ್ಗೆ ಅನುಮಾನ ಮೂಡಿಸಿದೆ.

ವಾಹನಕ್ಕೆ ಬೆಂಕಿ ಇಡಲಾಗಿತ್ತು: ಕಳೆದ 2017ನೇ ಮೇ 12ರಂದು ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ವಶಕ್ಕೆ ಪಡೆದು ಕೊಡ್ಲಿಪೇಟೆ ಪೊಲೀಸ್ ಹೊರ ಠಾಣೆಯ ಸಮೀಪ ನಿಲ್ಲಿಸಿದ್ದ ಸಂದರ್ಭ ಈ ವಾಹನಕ್ಕೆ ಆಕ್ರೋಶಿತ ಮಂದಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಕಳೆದ ಆರೇಳು ವರ್ಷಗಳಿಂದ ತಾಲೂಕಿನ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಬೇಳೂರು ಬಾಣೆ, ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಹಳ್ಳಿಗಳಲ್ಲಿ ರೈತರು ಸಾಕಿದ ಜಾನುವಾರುಗಳನ್ನು ರಾತ್ರಿ ವೇಳೆಯಲ್ಲಿ ಕೊಟ್ಟಿಗೆಯಿಂದ ಕದ್ದು ಕಸಾಯಿಖಾನೆಗೆ ಸಾಗಾಟ ಮಾಡುವ ದಂಧೆ ನಡೆಯುತ್ತಲೇ ಇದೆ. ಪಟ್ಟಣದಲ್ಲಿ ಓಡಾಡುವ ಬೀಡಾಡಿ ಜಾನುವಾರುಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಲೇ ಇವೆ.

ಇದೀಗ ಕೊಡ್ಲಿಪೇಟೆಯಲ್ಲಿ ಕೈಚಳಕ ತೋರಿದ್ದ ಖದೀಮ, ಬಂಟ್ವಾಳದಲ್ಲೂ ಕಳ್ಳತನ ಮಾಡುವ ಸಂದರ್ಭ ಪೊಲೀಸ್ ಬಲೆಗೆ ಬಿದ್ದಿದ್ದು, ಸೋಮವಾರ ಪೇಟೆಯಾದ್ಯಂತ ನಡೆದ ಜಾನುವಾರು ಗಳ ಕಳವು ಪ್ರಕರಣದಲ್ಲಿ ಈ ಗ್ಯಾಂಗ್‍ನ ಕೈವಾಡವಿದೆಯೇ? ಎಂಬ ಬಗ್ಗೆ ಸಂಶಯ ಮೂಡಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲಿದೆ.