ನಾಪೆÇೀಕ್ಲು, ಮೇ. 2: ಸಮೀಪದ ಬೇತು ಗ್ರಾಮದಲ್ಲಿರುವ ಕೊಡಗಿನ ಪುರಾಣ ಪ್ರಸಿದ್ಧ ಮಕ್ಕಿ ಶಾಸ್ತ್ತಾವು ದೇವಾಲಯ ಭಕ್ತಿಯ ಜತೆಗೆ ನಿಸರ್ಗ ರಮಣೀಯ ತಾಣಗಳಲ್ಲೊಂದು.

ಇಲ್ಲಿನ ದೇವಾಲಯಕ್ಕೆ ತನ್ನದೆ ಆದ ವೈಶಿಷ್ಟ್ಯತೆ ಇದೆ. ಮಕ್ಕಿ ಎಂದರೆ ಸತ್ಯ ಎಂಬ ಮಾತು ಈ ಭಾಗದ ಜನರ ಮನದಲ್ಲಿ ಬೇರೂರಿದೆ. ಇಲ್ಲಿ ಹೆಚ್ಚಾಗಿ ಸತ್ಯ ಪ್ರಮಾಣದ ಇತ್ಯರ್ಥಗಳು ನಡೆಯುವದು ವಾಡಿಕೆಯಾಗಿದೆ. ಶಾಸ್ತಾವು ದೇವರ ಜತೆ ಅಜ್ಜಪ್ಪ ಮತ್ತು ವಿಷ್ಣುಮೂರ್ತಿ (ಭೂತ) ದೈವಗಳ ನೆಲೆ ಕೂಡ ಇಲ್ಲಿದೆ. ಇಲ್ಲಿ ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ನಡೆಯುತ್ತದೆ. ಈಗ ನಡೆಯುವದು ಮುಖ್ಯ ಹಬ್ಬವಾಗಿದ್ದು ಸಣ್ಣ ಹಬ್ಬ ಡಿಸಂಬರ್ 15ರ ಸುಮಾರಿಗೆ ಧನುರ್ಮಾಸದಲ್ಲಿ ನಡೆಯುತ್ತದೆ.

ಹಬ್ಬಗಳು ಆಕರ್ಷಣೀಯವಾಗಿರುತ್ತವೆ. ಹರಕೆಯ ಮಣ್ಣಿನ ನಾಯಿ ಒಪ್ಪಿಸುವದು ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ಕೋಲಗಳು ಇಲ್ಲಿನ ಹಬ್ಬಗಳ ಮುಖ್ಯ ಆಕರ್ಷಣೆ. ಇಲ್ಲಿ ಅರ್ಪಿಸಲಾಗುತ್ತಿರುವ ಮಣ್ಣಿನ ನಾಯಿಯ ಹರಕೆ ಬಹಳ ವಿಶೇಷವಾಗಿದೆ. ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೆ, ಮನೆಯಲ್ಲಿ ನಾಯಿಗಳು ಸಮೃದ್ಧಿಯಾಗದಿದ್ದರೆ ಮಣ್ಣಿನ ನಾಯಿಯ ಹರಕೆಯನ್ನು ಮಾಡುವದನ್ನು ಕಾಣಬಹುದಾಗಿದೆ. ಕೆಲವರು ತೋಟ ಗದ್ದೆಗೂ, ತಮ್ಮ ಇಷ್ಟಾರ್ಥ ಸಿದ್ಧಿಗೂ ಮಣ್ಣಿನ ನಾಯಿಯ ಹರಕೆ ಮಾಡಿಕೊಳ್ಳುವದುಂಟು. ಈ ದೇವಾಲಯಕ್ಕೆ ವರ್ಷಂಪ್ರತಿ ನಾಯಿ ಹರಕೆ ಸಲ್ಲಿಸುತ್ತಿದ್ದರೂ ದೇವಳದಲ್ಲಿರುವ ನಾಯಿಯ ಸಂಖ್ಯೆ ಹೆಚ್ಚಾಗದಿರುವದು ದೇವರ ಮಹಿಮೆ ಎನ್ನಲಾಗಿದೆ.

ದೇವಾಲಯ ಎಂದೊಡನೆ ನಮಗೆ ಕಾಣುವದು ದೊಡ್ಡ ಗುಡಿ-ಗೋಪುರಗಳಲ್ಲ; ಇವುಗಳ ಕಲ್ಪನೆಯೊಂದಿಗೆ ಇಲ್ಲಿಗೆ ಭೇಟಿ ನೀಡುವ ಭಕ್ತರು ಹಲವಾರು ಮೆಟ್ಟಿಲುಗಳನ್ನೇರಿ ಎತ್ತರದ ಪ್ರಶಾಂತವಾದ ಸಮತಟ್ಟು ಸ್ಥಳಕ್ಕೆ ಬಂದರೆ, ದಟ್ಟ ಕಾನನದ ಮಧ್ಯೆ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ಸನ್ನಿಧಿ. ದೇವರಿಗೆ ಆಶ್ರಯವಿತ್ತಂತೆ ತೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ಮಣ್ಣಿನ ನಾಯಿಗಳು ಇದು ಮಕ್ಕಿ ಶಾಸ್ತಾವು ದೇವಾಲಯದ ಚಿತ್ರಣ.

ವಿಷ್ಣುಮೂರ್ತಿ ಕೋಲ ಕೆಂಡ(ಮೇಲೇರಿ)ದ ಮೇಲೆ ಬೀಳುವ ದೃಶ್ಯ ಅದ್ಭುತವಾಗಿರುತ್ತದೆ. ಅನಂತರ ಕೋಲ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಾಣಕ್ಕೆ ಬಂದು ಭಕ್ತರನ್ನು ಹರಸುವ ಕಾರ್ಯಕ್ರಮವಿದೆ. ಅಂತಯೇ ಶ್ರೀ ಮಕ್ಕಿ ಶಾಸ್ತಾವು ದೇವಾಲಯ ಭಕ್ತಿಯ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಈ ಹಬ್ಬವನ್ನು ಭಕ್ತಾದಿಗಳಿಗೆ ಅನ್ನಸಂತರ್ಪಣೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಥತೆಗಳನ್ನು ನಡೆಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ತಿಳಿಸಿದ್ದಾರೆ. ನೆನೆದವರ ಮನದಲ್ಲಿ ಎಂಬಂತೆ ಮಕ್ಕಿ ಶಾಸ್ತಾವು ಈ ಭಾಗದ ಜನರ ಶ್ರದ್ಧಾಭಕ್ತಿಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.