ಸೋಮವಾರಪೇಟೆ, ಮೇ 2: ಇಲ್ಲಿಗೆ ಸಮೀಪದ ಕುಮಾರಳ್ಳಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕಳೆದ 15ದಿನಗಳಿಂದ ಆಚರಿಸಿಕೊಂಡು ಬರುತ್ತಿರುವ ಉತ್ಸವದಲ್ಲಿ ಬೆಂಕಿಕೊಂಡ ಹಾಯುವದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆ, ವಿವಿಧ ಸುಗ್ಗಿ ಉತ್ಸವಗಳು ನಡೆದವು. ಬಿಲ್ಲು ಒಡೆಯುವದು, ದೇವರ ಅಡ್ಡಪಲ್ಲಕ್ಕಿ, ಬೆಂಕಿ ಹಾಯುವದು, ಕೋಲಾಟ ಹಾಗೂ ದೀಪ ತೂಗುವದು ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ಆಚರಣೆಗಳು ನಡೆದವು. ದೇವರ ಒಡೆಕಾರರಾದ ಕೆ.ಜಿ. ತಮ್ಮಯ್ಯ, ಜೆ.ಬಿ. ಬಿದ್ದಪ್ಪ, ಎಚ್.ಎನ್. ಕಾರ್ಯಪ್ಪ, ಕೆ.ಸಿ. ಪ್ರಸನ್ನ ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷರಾದ ಜೆ.ಸಿ. ಉದಯಕುಮಾರ್, ಕಾರ್ಯದರ್ಶಿ ಕೆ.ಡಿ. ಕಿರಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಕೆ. ಮಾಚಯ್ಯ, ಎಚ್.ಟಿ. ಸೀತಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಉತ್ಸವದಲ್ಲಿ ಸಂಭ್ರಮಿಸಿದರು.