ಶ್ರೀಮಂಗಲ, ಮೇ 3 : ದಕ್ಷಿಣ ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ಶ್ರೀಮಂಗಲ-ಕುಟ್ಟ ರಾಜ್ಯ ಹೆದ್ದಾರಿಯ ಕಾಯಿಮಾನಿಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 7.30 ಗಂಟೆಗೆ ರೈತನೊರ್ವರನ್ನು ಕಾಡಾನೆ ದಾಳಿ ನಡೆಸಿ ದಾರುಣವಾಗಿ ಕೊಂದು ಹಾಕಿದೆ. ಶ್ರೀಮಂಗಲ ಸಮೀಪ ಕಾಯಿಮಾನಿ, ಬ್ರಹ್ಮಗಿರಿ ಸ್ಪೋಟ್ರ್ಸ್ ಕ್ಲಬ್ ಸಮೀಪ ವಾಸವಿರುವ ಚೋಕಿರ ದಿ. ಕುಟ್ಟಪ್ಪ ಅವರ ಪುತ್ರ ರೈತ ಸುಧಾ ಕುಟ್ಟಪ್ಪ (42) ಕಾಡಾನೆ ದಾಳಿಗೆ ತುತ್ತಾಗಿ ಬಲಿಯಾದ ದುರ್ದೈವಿ ಯಾಗಿದ್ದಾರೆ. ಬೆಳಿಗ್ಗೆ ಸಮೀಪದ ಅಂಗಡಿಯಿಂದ ಮನೆಗೆ ಸಾಮಗ್ರಿ ತರಲು ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡ ಕಾಡಾನೆ ಸುಧಾ ಕುಟ್ಟಪ್ಪ ಅವರನ್ನು ಅಟ್ಟಿಸಿಕೊಂಡು ಹೋಗಿ ಕೊಂದಿದೆ. ಈ ಸಂದರ್ಭ ಸುದಾ ಕುಟ್ಟಪ್ಪ ಅವರ ಹೊಟ್ಟೆಯ ಭಾಗಕ್ಕೆ ಕಾಡಾನೆ ದಂತದಿಂದ ತಿವಿದಿದ್ದು, ಹೊಟ್ಟೆಯಿಂದ ಕರಳು ಹೊರಕ್ಕೆ ಬಂದಿದೆ. ಇದಲ್ಲದೆ ತಲೆ ಹಾಗೂ ದೇಹದ ಇತರ ಭಾಗವನ್ನು ಕಾಲಿನಿಂದ ಮೆಟ್ಟಿರುವ ಗುರುತುಗಳು ಕಂಡು ಬಂದಿದೆ. ತಲೆ ಭಾಗ ಹೊಡೆದು ಹೋಗಿ, ಕಾಲು, ಸೊಂಟ ಇತರೆ ಭಾಗಕ್ಕೆ ತೀವ್ರ ಗಾಯವಾಗಿ ಮುರಿತ ಉಂಟಾಗಿ ದಾರುಣವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುಧಾ ಕುಟ್ಟಪ್ಪ ಅವರ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭ ಪ್ರತ್ಯಕ್ಷದರ್ಶಿಯಾಗಿದ್ದ ವಿಶ್ವ ಎಂಬವರು ಆನೆಯ ಮೇಲೆ ಕಲ್ಲೆಸೆದು ದಾಳಿ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲದೆ ಹೆದ್ದಾರಿಯಲ್ಲಿ ಬಂದ ಲಾರಿಯ ಚಾಲಕ ಕಾಡಾನೆ ದಾಳಿ ನಡೆಸುತ್ತಿದ್ದನ್ನು ಕಂಡು ದೀರ್ಘವಾಗಿ ಲಾರಿಯಿಂದ ಹಾರನ್ ಮಾಡಿ ಕಾಡಾನೆಯನ್ನು ಬೆದರಿಸಿ ಓಡಿಸಲು ಪ್ರಯತ್ನಪಟ್ಟರೂ, ಕಾಡಾನೆ ಸುಧಾ ಕುಟ್ಟಪ್ಪ ಅವರನ್ನು ಬಿಟ್ಟು ಲಾರಿಯ ಮೇಲೆ ಎರಗಿದೆ. ಲಾರಿಯನ್ನು ತುಸು ದೂರ ದೂಡಿಕೊಂಡು ಹೋಗಿದೆ. ನಂತರ ಪಕ್ಕದ ಕಾಫಿ ತೋಟಕ್ಕೆ ನುಗ್ಗಿದೆ. ಅಷ್ಟರಲ್ಲಿಯೇ ರೈತ ಸ್ಥಳದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಹೆದ್ದಾರಿಯಿಂದ ರೈತನನ್ನು 40 ಅಡಿ ದೂರಕ್ಕೆ ಚಿಕ್ಕ ರಸ್ತೆಯೊಳಕ್ಕೆ ಓಡಿಸಿಕೊಂಡು ಹೋಗಿದ್ದು, ದಾರಿಯಲ್ಲಿ ಚಪ್ಪಲಿ, ಟೋಪಿ ಬಿದ್ದಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ರೈತ ಸಮೀಪದ ಕಾಫಿ ತೋಟಕ್ಕೆ ನುಗ್ಗಿದರೂ ಬೆಂಬಿಡದೆ ಕಾಡಾನೆ ದಾಳಿ ಮಾಡಿದೆ.

ಮೃತ ರೈತ ವಿವಾಹಿತನಾಗಿದ್ದು, ಪುತ್ರಿ ಹಿಮಾ (17) ಹಾಗೂ ಪುತ್ರ ಸಂಜು (15) ಅವರನ್ನು ಅಗಲಿದ್ದು, ಇವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ಮೊದಲ ಪತ್ನಿ ವಿಚ್ಚೇದನ ಪಡೆದಿದ್ದು, ಮಕ್ಕಳು ಮೊದಲ ಪತ್ನಿಯೊಂದಿಗೆ ಮಡಿಕೇರಿಯಲ್ಲಿ ವಾಸವಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಎರಡನೇ ಮದುವೆಯಾಗಿರುವ ಸುಧಾ ಕುಟ್ಟಪ್ಪ ಅವರೊಂದಿಗೆ ಪತ್ನಿ ಪುಷ್ಪ ಹಾಗೂ ತಾಯಿ ಸರಸ್ವತಿ ವಾಸವಾಗಿದ್ದರು.

ದುರ್ಘಟನೆ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ಕಾರ್ಮಿಕರು ತೀವ್ರ ತರಹದ ಪ್ರತಿಭಟನೆ ನಡೆಸಿದರು. ಶ್ರೀಮಂಗಲ - ಕುಟ್ಟ ರಾಜ್ಯ ಹೆದ್ದಾರಿಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ

(ಮೊದಲ ಪುಟದಿಂದ) ಸಂಚಾರಕ್ಕೆ ತಡೆ ಉಂಟಾಯಿತು. ಪೆÇ್ರೀ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಚಿಮ್ಮಂಗಡ ಗಣೇಶ್ ನೇತೃತ್ವದಲ್ಲಿ ರೈತರು ಮತ್ತು ಮೃತ ರೈತನ ಕುಟುಂಬದವರ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮೃತ ರೈತನ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡಬೇಕು, ರೈತನ ಪುತ್ರನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಬೇಕು, ತಕ್ಷಣ 10 ಲಕ್ಷ ಪರಿಹಾರ ನೀಡಬೇಕು ಅಲ್ಲದೆ ಕಾಡಾನೆ ದಾಳಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕು, ಹರಿಹರ ಗ್ರಾಮದಲ್ಲಿ ಹುಲಿ ಹುರುಳಿಗೆ ಬಿದ್ದು ಸತ್ತ ಪ್ರಕರಣದಲ್ಲಿ ರೈತ ಬಾಚೀರ ಪ್ರದೀಪ್ ಕುಶಾಲಪ್ಪ ಹಾಗೂ ಪಾಲಾಂಗಾಲದಲ್ಲಿ ಕಾಡಾನೆ ಗುಂಡೇಟಿಗೆ ಸತ್ತಿರುವ ಪ್ರಕರಣದಲ್ಲಿ ಕರಿನೆರವಂಡ ಹರೀಶ್ ಮೇದಪ್ಪ ಅವರ ಮೇಲೆ ಹೂಡಿರುವ ಮೊಕದ್ದಮೆಯನ್ನು ವಾಪಾಸ್ಸು ಪಡೆಯುವ ಬೇಡಿಕೆಗಳನ್ನು ಇಟ್ಟು ಇದರ ಈಡೇರಿಕೆಗಾಗಿ ಸ್ಥಳಕ್ಕೆ ಜಿಲ್ಲಾ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಆಗಮಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಮಡಿಕೇರಿ ಡಿ.ಎಫ್.ಓ ಮಂಜುನಾಥ್, ಮಡಿಕೇರಿ ವನ್ಯ ಜೀವಿ ಎ.ಸಿ.ಎಫ್ ದಯಾನಂದ, ಶ್ರೀಮಂಗಲ ಆರ್.ಎಫ್.ಓ ವೀರೆಂದ್ರ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದಾಗ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಡಿ.ವೈ.ಎಸ್.ಪಿ ನಾಗಪ್ಪ ಅವರು ರಸ್ತೆ ತಡೆ ಕೈಬಿಟ್ಟು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿದರು. ಈ ಪ್ರಕರಣದ ಬೇಡಿಕೆಯ ಬಗ್ಗೆ ಕುಳಿತು ಮಾತನಾಡಲು ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿಲ್ಲಾ ಸಿ.ಸಿ.ಎಫ್ ಸಂತೋಷ್ ಕುಮಾರ್ ಅವರು, ವೀರಾಜಪೇಟೆ ಡಿ.ಎಫ್.ಓ ಮರಿಯಾ ಕ್ರಿಸ್ತರಾಜ್ ಅವರೊಂದಿಗೆ ಆಗಮಿಸಿದರು. ಈ ಸಂದರ್ಭ ಪೆÇ್ರ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್, ಜಿಲ್ಲಾ ಪಂಚಾಯತ್ ಸದಸ್ಯ ಶಿವು ಮಾದಪ್ಪ, ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ, ಜಿಲ್ಲಾ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಮನು ಸೋಮಯ್ಯ ಅವರು ಕಾಡಾನೆ ಸಮಸ್ಯೆಯ ಬಗ್ಗೆ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಅವರು ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿಗೆ ತುತ್ತಾಗಿ ಮರಣ ಹೊಂದಿದ ಸಂದರ್ಭ 1 ಕೋಟಿ ಪರಿಹಾರ ಹಾಗೂ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿದೆ. ಆದರೆ ಸಾಮಾನ್ಯ ಜನರು ಸತ್ತರೆ ರೂ. 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಸಾಮಾನ್ಯ ಜನರ ಜೀವದ ಬೆಲೆ ರೂ. 5 ಲಕ್ಷ ಮಾತ್ರವೇ ಎಂದು ಪ್ರಶ್ನಿಸಿ ಈ ರೀತಿಯ ತಾರತಮ್ಯ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

ಭರವಸೆ: ಶೀಘ್ರದಲ್ಲೇ ಮೃತ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ, ರೂ. 25 ಲಕ್ಷ ಪರಿಹಾರದ ಬೇಡಿಕೆಯ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ, ಮೃತ ರೈತನ ಪುತ್ರ ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾರ್ಹತೆ ಪರಿಗಣಿಸಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಉದ್ಯೋಗ, ಹರಿಹರದಲ್ಲಿ ಉರುಳಿಗೆ ಸಿಲುಕಿ ಹುಲಿ ಸತ್ತಿರುವ ಹಾಗೂ ಪಾಲಾಂಗಾಲ ಗ್ರಾಮದಲ್ಲಿ ಕಾಡಾನೆ ಗುಂಡೇಟಿಗೆ ಸತ್ತಿರುವ ಪ್ರಕರಣದಲ್ಲಿ ರೈತರ ಮೇಲೆ ಹೂಡಿರುವ ಮೊಕದ್ದಮೆಯನ್ನು ಬಿ ರಿಪೆÇೀರ್ಟ್ ಮಾಡಿ ಕೈಬಿಡುವ ಭರವಸೆ, ಅರಣ್ಯದಂಚಿನಲ್ಲಿ ವನ್ಯ ಪ್ರಾಣಿಗಳು ಗ್ರಾಮಕ್ಕೆ ನುಸುಳುವದನ್ನು ತಡೆಗಟ್ಟಲು ಶಾಶ್ವತ ಯೋಜನೆ ಸೇರಿದಂತೆ ಗ್ರಾಮಕ್ಕೆ ನುಸುಳಿದ ಕಾಡಾನೆಗಳನ್ನು ತಕ್ಷಣವೇ ಅರಣ್ಯಕ್ಕೆ ಅಟ್ಟಲು ಹೆಚ್ಚಿನ ಸಿಬ್ಬಂದಿಗಳನ್ನೊಳಗೊಂಡ ಕಾರ್ಯಪಡೆ ರಚನೆ ಮಾಡುವ ಆಶ್ವಾಸನೆಯನ್ನು ಸಿ.ಸಿ.ಎಫ್. ಸಂತೋಷ್ ಕುಮಾರ್ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತಮ್ಮು ಮುತ್ತಣ್ಣ, ತಾಲೂಕು ಜಂಟಿ ಕಾರ್ಯದರ್ಶಿ ದಾದ ದೇವಯ್ಯ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ತಿಮ್ಮಯ್ಯ, ಬಿರುನಾಣಿ ಗ್ರಾ.ಪಂ. ಸದಸ್ಯ ಕಾಯಪಂಡ ಸುನೀಲ್, ಟಿ.ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಚೊಟ್ಟೆಯಂಡಮಾಡ ಉದಯ, ಕುಟ್ಟ ಗ್ರಾ.ಪಂ. ಸದಸ್ಯರುಗಳಾದ ಹೆಚ್.ವೈ. ರಾಮಕೃಷ್ಣ, ಪ್ರಕಾಶ್ ಉತ್ತಪ್ಪ ಹಾಗೂ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕುಟ್ಟ ವೃತ್ತ ನಿರೀಕ್ಷಕ ಡಿ. ಮಹೇಶ್, ವೀರಾಜಪೇಟೆ ಉಪನಿರೀಕ್ಷಕ ಸುರೇಶ್ ಬೋಪಣ್ಣ, ಸಂತೋಷ್ ಕಶ್ಯಪ್, ಎ.ಎಸ್.ಐ. ಟಿ.ಎಂ. ಸಾಬು, ಮೋಹಿನುದ್ದೀನ್ ಸೇರಿದಂತೆ ಪೆÇಲೀಸರು ಬಂದೋಬಸ್ತ್ ಕಲ್ಪಿಸಿದರು.