ಶನಿವಾರಸಂತೆ, ಮೇ 3: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿರುವ ಜಿಲ್ಲಾ ಅಪರಾಧ ಪತ್ತೆದಳ ಮತ್ತು ಶನಿವಾರಸಂತೆ ಪೊಲೀಸರು ಅಕ್ರಮವಾಗಿ ಅಂದರ್-ಬಾಹರ್ ಜೂಜಾಡುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿ 26 ಮಂದಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಗುಡುಗಳಲೆ ಜಾತ್ರೆ ಮೈದಾನದ ಬಸವೇಶ್ವರ ದೇವಸ್ಥಾನದ ಹಿಂಭಾಗದ ಪೈಸಾರಿ ಜಾಗದಲ್ಲಿ ಜೂಜಾಡುತ್ತಿದ್ದ 20 ಮಂದಿಯನ್ನು ಬಂಧಿಸಿರುವ ಪೊಲೀಸರು ಪಣಕ್ಕಿಟ್ಟಿದ್ದ ರೂ. 45,780 ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಶನಿವಾರಸಂತೆ ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಸ್ಮಶಾನದ ಬಳಿ ಖಾಲಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿರುವ ಪೊಲೀಸರು ಪಣಕ್ಕಿಟ್ಟಿದ್ದ ರೂ. 28,805 ವಶಕ್ಕೆ ಪಡೆದು, ಆರೋಪಿಗಳಾದ ಸುರೇಶ್, ಸುನಿಲ್, ಕುಮಾರ್, ಯೋಗೇಶ್, ಮೋಹನ್, ಶಿವಣ್ಣ, ಕೃಷ್ಣ, ಧರ್ಮಪ್ಪ, ಮಂಜುನಾಥ, ನವೀನ್ ಹಾಗೂ ಇತರ 16 ಮಂದಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ವೃತ್ತ ನಿರೀಕ್ಷಕ ನಾಗೇಶ್, ಸಹಾಯಕ ನಿರೀಕ್ಷಕ ಹಮೀದ್, ಶನಿವಾರಸಂತೆ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ, ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಶಫೀರ್, ಬೋಪಣ್ಣ, ಹರೀಶ್, ಅನಿಲ್, ಯೋಗೇಶ್, ಶಶಿಕುಮಾರ್, ಷಣ್ಮುಕ ನಾಯಕ್, ಶಿವಲಿಂಗ ಪಾಲ್ಗೊಂಡಿದ್ದರು.