ಬೆಂಗಳೂರು, ಜು. 8: ಕಾಂಗ್ರೆಸ್ ಹಾಗೂ ಜೆಡಿಎಸ್ನ ಹಾಗೂ ಪಕ್ಷೇತರ, ಅತೃಪ್ತ ಶಾಸಕರ ರಾಜೀನಾಮೆ ನಂತರ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸಮ್ಮಿಶ್ರ ಸರ್ಕಾರದ ಶಾಸಕರ ಸಂಖ್ಯಾಬಲ 103 ಕ್ಕೆ ಕುಸಿದಿದ್ದು ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಸರಣಿ ರಾಜೀನಾಮೆ ಬಳಿಕ ಬಿಜೆಪಿ ಸದಸ್ಯ ಬಲ 107 ಕ್ಕೆ ಏರಿದೆ.ಈ ನಡುವೆ ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿ ಸಂಪುಟ ಪುನರ್ರಚಿಸುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ನ 22 ಸಚಿವರು, ಬಳಿಕ e.Éಡಿ.ಎಸ್ ನ 9 ಸಚಿವರು ಹಾಗೂ ಪಕ್ಷೇತರ ಸಚಿವÀ ನಾಗೇಶ್ ಸೇರಿದಂತೆ ಮೈತ್ರಿಕೂಟದ ಒಟ್ಟು 32 ಸಚಿವರು ತಮ್ಮ ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎಲ್ಲಾ ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವದೋ ಅಥವಾ ಸರ್ಕಾರ ಪತನವಾಗುವದೋ ಎಂಬ ಆತಂಕ ಮೈತ್ರಿ ಕೂಟದಲ್ಲಿ ಮನೆ ಮಾಡಿದೆ. ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು ಕಾಮರಾಜ ಮಾರ್ಗ ಅನುಸರಿಸಿ ಎಲ್ಲಾ ಸಚಿವರ ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.
ಆದರೆ ಈ ನಡುವೆ 13 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವದಿಲ್ಲ ಎಂದು ಮತ್ತೆ ಇಂದು ಖಚಿತಪಡಿಸಿದ್ದು ಸಚಿವರುಗಳ ರಾಜೀನಾಮೆಯಿಂದ ಸರಕಾರ ಉಳಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಅಲ್ಲದೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷೇತರ ಶಾಸಕ ನಾಗೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಅಲ್ಲದೆ, ಮತ್ತೊಬ್ಬ ಪಕ್ಷೇತರ ಶಾಸಕ ಆರ್. ಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಪಕ್ಷೇತರ ಶಾಸಕ ನಾಗೇಶ್ ರಾಜೀನಾಮೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಬಳಿಕ ಆರ್ ಶಂಕರ್ ಅತೃಪ್ತ ಶಾಸಕರುಗಳೊಂದಿಗೆ ಕೈ ಜೋಡಿಸಲು ಮುಂಬಯಿಗೆ ತೆರಳಿದ್ದಾರೆ. ಅಲ್ಲದೆ, ಶಾಸಕ ರೋಷನ್ ಬೇಗ್ ಕೂಡ ರಾಜೀನಾಮೆ ನೀಡಿ ಬಿಜೆಪಿ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್ ಅವರು ಏಐಸಿಸಿಗೆ ವಿವರ ವರದಿ ಒಪ್ಪಿಸಲು ದೆಹಲಿಗೆ ತೆರಳಿದ್ದಾರೆ.
ಈ ನಡುವೆ ರಾಮಲಿಂಗಾರೆಡ್ಡಿ ಅವರ ಪುತ್ರಿ ಶಾಸಕಿ ಸೌಮ್ಯ ರೆಡ್ಡಿ ಅವರು ನವದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಇಂದು ಭೇಟಿಯಾಗಿದ್ದರು. ಅಲ್ಲದೆ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವದಾಗಿ ಹೇಳಿಕೆಯಿತ್ತಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಈ ಹಿಂದಿನ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆದರೆ, ರಾಮಲಿಂಗಾರೆಡ್ಡಿ ಅವರು ತಮಗೆ ಒಡ್ಡಿದ ಸಚಿವ ಸ್ಥಾನದ ಆಮಿಷವನ್ನು ನಿರಾಕರಿಸಿದ್ದು, ರಾಜೀನಾಮೆ ಹಿಂಪಡೆಯುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ ನಾನು 30 ವರ್ಷದಿಂದ ಶಾಸಕನಾಗಿದ್ದೇನೆ. ಯಾವದೇ ಹುದ್ದೆಗೆ ಲಾಬಿ ಮಾಡಿಲ್ಲ. ನಾನು ಮುಖ್ಯ ಮಂತ್ರಿ ಜತೆ ಮಾತುಕತೆ ನಡೆಸಿಲ್ಲ. ನನ್ನ ರಾಜೀನಾಮೆ ನಿರ್ಧಾರ ಅಚಲ. ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಾನು ಮುಂಬಯಿಗೂ ಹೋಗಲ್ಲ ದೆಹಲಿಗೂ ಹೋಗಲ್ಲ. ಬೆಂಗಳೂರಿನಲ್ಲಿ ಇರುತ್ತೇನೆ.
(ಮೊದಲ ಪುಟದಿಂದ) ಪುತ್ರಿ ಸೌಮ್ಯ ರೆಡ್ಡಿ ಶಾಸÀಕ ಸ್ಥಾನಕ್ಕೆ ರಾಜೀನಾಮೆ ನೀಡುವದು ಅವರ ವಿವೇಚನೆಗೆ ಬಿಟ್ಟಿದ್ದೇನೆ ಎಂದು ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ ಜೆಡಿಎಸ್ ಶಾಸಕರುಗಳನ್ನು ಕೊಡಗಿನ ಏಳನೇ ಹೊಸಕೋಟೆ ಬಳಿಯ ಪ್ಯಾಡಿಂಗ್ ಟನ್ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲು 35 ಕೊಠಡಿಗಳನ್ನು ಬುಕ್ ಮಾಡಿದ್ದು ಕೊನೆ ಘಳಿಗೆಯಲ್ಲಿ ಇದನ್ನು ರದ್ದು ಪಡಿಸಲಾಯಿತು. ಎಲ್ಲ ಜೆಡಿಎಸ್ ಶಾಸಕರುಗಳನ್ನು ನಂದಿ ಬೆಟ್ಟದ ಬಳಿಯ ರೆಸಾರ್ಟ್ ಒಂದಕ್ಕೆ ಕರೆದೊಯ್ಯಲಾಯಿತು.
10 ದಿನಗಳ ಯುಎಸ್ ಪ್ರವಾಸ ಮುಗಿಸಿಕೊಂಡು ಭಾನುವಾರ ತಡ ರಾತ್ರಿ ಬಂದ ಕುಮಾರಸ್ವಾಮಿ ಅವರು ಯಾರಿಗೂ ಪ್ರತಿಕ್ರಿಯೆ ನೀಡಿರಲಿಲ್ಲ. 13 ಶಾಸಕರ ರಾಜೀನಾಮೆ ನಂತರ ಸರ್ಕಾರದ ಭವಿಷ್ಯವೇನು? ಎಂದು ಪ್ರಶ್ನಿಸಲು ಎಲ್ಲರೂ ಸಜ್ಜಾಗಿ ಕಾದಿದ್ದರು. ಆದರೆ, ರೈತರ ಜತೆ ಸಭೆ ಮುಗಿದ ನಂತರ ಈ ಬಗ್ಗೆ ಮಾತನಾಡಿದ ಸಿಎಂ, ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಲಾರೆ, ಬಿಜೆಪಿ ಏನು ಮಾಡುತ್ತಿದೆ, ಇತರರು ಏನು ಮಾಡುತ್ತಿದ್ದಾರೆ ಎಂಬದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ, ಮೈತ್ರಿ ಧರ್ಮ ಪಾಲಿಸುತ್ತಿದ್ದೇನೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ನಿಲ್ಲದಂತೆ ನೋಡಿಕೊಳ್ಳಬೇಕು, ಮೈತ್ರಿ ಜವಾಬ್ದಾರಿಯನ್ನು ನಿಭಾಯಿಸುವದು ಮುಖ್ಯ, ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಬಿಜೆಪಿ ಆಪರೇಷನ್ ಕಮಲದ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರ ವನ್ನು ಅಸ್ಥಿರಗೊಳಿಸಲು ಒಂದು ವರ್ಷದಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಿದೆ. 2008 ರಲ್ಲಿ ಬಿ.ಎಸ್ ಯಡಿಯೂರಪ್ಪ ಇದೇ ರೀತಿ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ ಆದರೆ, ಈ ಎಲ್ಲ ಆರೋಪಗಳನ್ನು ಬಿಜೆಪಿ ನಾಯಕರು ಅಲ್ಲಗಳೆದಿದ್ದು ಮುಖ್ಯ ಮಂತ್ರಿಯವರ ರಾಜೀನಾಮೆಗೆ ಒತ್ತ್ತಾಯಿಸಿ ಪ್ರತಿಭಟನೆ ನಡೆಸಲಿರುವದಾಗಿ ಎಚ್ಚರಿಸಿದ್ದಾರೆ.
ಈ ನಡುವೆ ರಾಜ್ಯಪಾಲರ ವಿರುದ್ಧ ಉಪಮುಖ್ಯಮಂತ್ರಿ ಪರಮೇಶ್ವರ್ ವಾಗ್ದಾಳಿ ನಡೆಸಿದರು. ರಾಜ್ಯಪಾಲರು ಶಾಸಕರ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ರಾಜೀನಾಮೆ ಕೊಡಲು ಹೋದ ಶಾಸಕರ ಜತೆÀ ಎರಡು ಗಂಟೆ ಚರ್ಚಿಸುವ ಅಗತ್ಯವೇನಿತ್ತು. ಪೊಲೀಸ್ ಆಯುಕ್ತರ ಜತೆ ಶಾಸಕರ ಜತೆ ಕೂರಿಸಿ ಮಾತನಾಡಿದ್ದಾರೆ. ಇವೆಲ್ಲ ಗಮನಿಸಿದರೆ ರಾಜ್ಯಪಾಲರು ಸರ್ಕಾರ ಅಸ್ಥಿರ ಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದಿದ್ದಾರೆ.
ಬಿಜೆಪಿ ನಾಯಕರು ಸತತ 6ನೇ ಬಾರಿಗೆ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ನಾವು ನಮ್ಮ ಶಾಸಕರ ಜತೆ ಸಂಪರ್ಕ ಮಾಡಿದ್ದೇವೆ. ಅವರ ಮನವೊಲಿಸುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು. ಕುಮಾರಸ್ವಾಮಿ ನೈತಿಕತೆ ಕಳೆದುಕೊಂಡ ಮೇಲೂ ಅಧಿಕಾರಕ್ಕೆ ಅಂಟಿ ಕುಳಿತು ಕೊಂಡಿದ್ದಾರೆ ಎಂದು ಆಗ್ರಹಿಸಿದರು.