ವೀರಾಜಪೇಟೆ, ಜು. 8: ಮಂಗಳೂರು ಕಡೆಯಿಂದ ಕಾರಿನಲ್ಲಿ ತಂದ ಎರಡು ತಲೆಯ ಹಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು, ಎರಡು ತಲೆ ಹಾವು ಹಾಗೂ ಎರಡು ಕಾರುಗಳನ್ನು ಮಡಿಕೇರಿ ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶ ಪಡಿಸಿಕೊಂಡು ಮೂವರನ್ನು ಇಂದು ಇಲ್ಲಿನ ಸಮುಚ್ಛಯ ನ್ಯಾಯಾಲಯದ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಮೂವರನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಉಡುಪಿಯ ಸುಹೇಲ್ ಅಹಮ್ಮದ್, ಜುಹೇರ್ ಹಾಗೂ ಮೂಡುಬಿದಿರೆಯ ಶೇಕ್ ಅಮೀರ್ ಶಾಹಿಲ್ ಎಂಬ ಮೂವರು ಎರಡು ತಲೆ ಹಾವಿನೊಂದಿಗೆ ಶನಿವಾರ ದಿನ ವೀರಾಜಪೇಟೆಗೆ ಬಂದಿದ್ದು ಇದನ್ನು ಅಕ್ರಮ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದರು.
ವೀರಾಜಪೇಟೆಯಲ್ಲಿರುವ ಅರಣ್ಯ ಸಂಚಾರಿದಳವರಿಗೆ ಸುಳಿವು ದೊರೆತ ಮೇರೆ ಮಡಿಕೇರಿಯ ಸಿ.ಐ.ಡಿ ಅರಣ್ಯ ಸಂಚಾರಿದಳವರೊಂದಿಗೆ ಸೇರಿ ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿಯಲ್ಲಿ ಕಾರುಗಳನ್ನು ಹಿಂಬಾಲಿಸಿ ತಪಾಸಣೆ ನಡೆಸಿದಾಗ ನ್ಯಾನೋ ಕಾರಿನಲ್ಲಿ ಜೀವಂತವಾಗಿರುವ ಎರಡು ತಲೆ (ರೆಡ್ ಸ್ಯಾಂಡ್ಬೋ ಸ್ನೇಕ್) ಪತ್ತೆಯಾಗಿದೆ. ಸಿಬ್ಬಂದಿಗಳು, ಮೂವರನ್ನು ವಿಚಾರಿಸಿದಾಗ ಈ ಎರಡು ತಲೆ ಹಾವನ್ನು ಬೆಂಗಳೂರಿನಿಂದ ಮಂಗಳೂರಿಗೆ ತಂದು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸಿದ್ದೆವು. ಈ ಎರಡು ತಲೆ ಹಾವನ್ನು ರೂ 30ಲಕ್ಷಕ್ಕೆ ಖರೀದಿಸುವ ಗಿರಾಕಿಯನ್ನು ಶೋಧಿಸುತ್ತಿದ್ದಾಗ ಸಿ.ಐ.ಡಿ ಅರಣ್ಯ ಇಲಾಖೆ ಬಲೆಗೆ ಬಿದ್ದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ತಲೆ ಹಾವಿನ ಸಾಗಾಟಕ್ಕೆ ಬಳಸಿದ ನ್ಯಾನೋ ಕಾರು (ಕೆ.ಎ.19 ಎಂ.ಎ. 4562) ಹಾಗೂ ರಿಟ್ಜ್ ಕಾರು (ಕೆ.ಎ. 20- ಝಡ್ 0466) ಎರಡು ಕಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್.ಪಿ. ಎಸ್.ಎಸ್. ಕಾಶಿಯವರ ಮಾರ್ಗದರ್ಶನದಲ್ಲಿ ಸಂಚಾರಿದಳದ ಪಿ.ಎಸ್.ಐ ಎಚ್.ಸಿ. ಸಣ್ಣಯ್ಯ, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಸಿ.ಎಂ. ರೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ದೇಶದ ದೊಡ್ಡ ದೊಡ್ಡ ನಗರಗಳು ಹಾಗೂ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿನ ಬೆಲೆ ಒಂದು ಕೋಟಿಗೂ ಅಧಿಕವಾಗಿದ್ದು ದೇಶದ ಅತಿ ದೊಡ್ಡ ಶ್ರೀಮಂತರ ಮನೆಯಲ್ಲಿ ಈ ಹಾವನ್ನು ಸಂಪತ್ತಿಗಾಗಿ ಸಾಕುತ್ತಿದ್ದಾರೆ. ಈ ಹಾವನ್ನು ಮಾಟ, ಮಂತ್ರ, ಜ್ಯೋತಿಷ್ಯ ಹಾಗೂ ವಾಸ್ತುವಿಗಾಗಿ ಬಳಸುತ್ತಿದ್ದಾರೆ. ಇದು ಅರಣ್ಯದಲ್ಲಿಯೂ ಕಾಣ ಸಿಗುವದು ಅಪರೂಪವೆನ್ನಲಾಗಿದೆ.