ಮಡಿಕೇರಿ, ಜು. 8: ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಸಾರ್ವಜನಿಕರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಾಗಿ ಪರದಾಡುವಂತಾಗಿದೆ ಎಂದು ಸದಸ್ಯ ಡಿ. ರಾಜೇಶ್ ಪದ್ಮನಾಭ ಆರೋಪಿಸಿದ್ದಾರೆ. ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಕಾರ್ಡ್‍ಗೆ 15 ಹಾಗೂ ಪಡಿತರ ಚೀಟಿಗೆ 25 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ಆದರೆ ತಾಲೂಕಿನಾದ್ಯಂತ ಆರು ಹೋಬಳಿಗಳಿದ್ದು, ಸುಮಾರು 2 ಲಕ್ಷ ಜನಸಂಖ್ಯೆ ಇದೆ. ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ ಕೇವಲ ಒಂದೇ ಆಧಾರ್ ನೋಂದಣಿ ಕೇಂದ್ರವಿರುವದರಿಂದ ದಿನಗೂಲಿ ನೌಕರರು, ಕಾರ್ಮಿಕರು, ರೈತರು, ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಆಧಾರ್ ಕಾರ್ಡ್‍ಗಾಗಿ ಅಲೆಯವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರಕಾರದ ಯಾವದೇ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವದರಿಂದ ತಾಲೂಕು ಕಚೇರಿಯಲ್ಲಿ ಮಧ್ಯಾಹ್ನದವರೆಗೆ ಮಾತ್ರ ನಡೆಯುತ್ತಿರುವ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ದಿನವಿಡೀ ಮುಂದುವರಿಸಬೇಕು. ಅಲ್ಲದೆ ತಾಲೂಕು ಕೇಂದ್ರದಲ್ಲಿ ಕನಿಷ್ಟ ಇನ್ನು ಎರಡು ಕೇಂದ್ರಗಳನ್ನು ಆರಂಭಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಜನಿಕಾಂತ್, ಅಗಸ್ಟಿನ್ ಬೆನ್ನಿ, ಮಹಮ್ಮದ್ ರಾಫಿ ಹಾಗೂ ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.