ಮಡಿಕೇರಿ, ಜು. 8: ದಲಿತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ತಾಲೂಕು ದಲಿತ ಹಿತರಕ್ಷಣಾ ಸಮಿತಿಯಲ್ಲಿ ದಲಿತರ ಸಮಸ್ಯೆಗಳು ಮತ್ತು ಕಾನೂನುಗಳ ಅರಿವು ಇರುವ ಸದಸ್ಯರ ಕೊರತೆ ಇರುವದರಿಂದ ಹಲವಾರು ವರ್ಷಗಳಿಂದ ಸಮಿತಿಯ ಆಶಯಗಳೇ ಈಡೇರದಂತಾಗಿದೆ ಎಂದು ಜಿಲ್ಲೆಯ ದಲಿತ ಮುಖಂಡರು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಿತಿಯಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುವದರೊಂದಿಗೆ ಅರ್ಹರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಯೋಜಕ ಹೆಚ್.ಜೆ. ಹನುಮಯ್ಯ, ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸುವದರೊಂದಿಗೆ ವಿವಿಧ ಸಮಿತಿಗಳನ್ನೂ ರಚಿಸಿದೆ. ಆದರೆ ಆ ಸಮಿತಿಗೆ ಪ್ರತಿನಿಧಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ದಲಿತರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ, ಕಾನೂನಿನ ಜ್ಞಾನವಿಲ್ಲದ 2-3 ಮಂದಿ ಸದಸ್ಯರನ್ನು ಮಾತ್ರ ನೇಮಿಸಲಾಗುತ್ತಿದ್ದು, ಇದರಿಂದಾಗಿ ದಲಿತ ಸಮುದಾಯಕ್ಕೆ ನ್ಯಾಯೋಚಿತವಾಗಿ ದೊರಕಬೇಕಾದ ಯಾವದೇ ಸವಲತ್ತುಗಳು ದೊರಕದಂತಾಗಿದೆ ಎಂದು ದೂರಿದರು.

ಗುಂಡ್ಲುಪೇಟೆಯಲ್ಲಿ ದಲಿತ ಯುವಕ ಬೆತ್ತಲೆ ಮೆರವಣಿಗೆ, ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳನ್ನು ಪ್ರಸ್ತಾಪಿಸಿ, ದಲಿತ ಸಂಘಟನೆಗಳು ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ನಡೆಸಲಿರುವದಾಗಿ ಘೋಷಿಸಿದರು.

ಮತ್ತೋರ್ವ ಮುಖಂಡ ಜಯಪ್ಪ ಹಾನಗಲ್ ಮಾತನಾಡಿ, ದಲಿತ ಹಿತರಕ್ಷಣಾ ಸಮಿತಿಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಪ್ರಸ್ತಾಪವಾದ ಅನೇಕ ವಿಷಯಗಳು ಇನ್ನೂ ಅನುಷ್ಠಾನವಾಗಿಲ್ಲ ಎಂದು ದೂರಿದರು.

ಜಿಲ್ಲಾ ಸಂಚಾಲಕ ಜೆ.ಆರ್. ಪಾಲಾಕ್ಷ ಮಾತನಾಡಿ, ಸರಕಾರದ ವಿವಿಧ ಸಮಿತಿಗಳಿಗೆ ಕಾನೂನಿನ ಅರಿವು ಇರುವ ದಲಿತ ಮುಖಂಡರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಹೊನ್ನಪ್ಪ ಉಪಸ್ಥಿತರಿದ್ದರು.